ಡಿಸ್ಮಿಸ್ ಮಾಡಿರುವ ನೌಕರರಿಗೆ ಗಣೇಶ ಹಬ್ಬದ ರಜೆ ಮಂಜೂರು ಮಾಡಿದ ಬಿಎಂಟಿಸಿ !
ಬೆಂಗಳೂರು: ಏಪ್ರಿಲ್‌ನಲ್ಲಿ ಮುಷ್ಕರ ನಡೆಸಿದ್ದರು ಎಂಬ ಕಾರಣಕ್ಕೆ ಸಾವಿರಾರು ನೌಕರರನ್ನು ಮನಸೋಯಿಚ್ಛೆ ವಜಾ ಮಾಡಿರುವ ಸಾರಿಗೆ ನಿಗಮಗಳ ಅಧಿಕಾರಿಗಳು, ತಾವು ಯಾರನ್ನು ಡಿಸ್ಮಿಸ್ ಮಾಡಿದ್ದೇವೆ ಎಂಬುದನ್ನೇ ಇನ್ನು ತಿಳಿದುಕೊಂಡಂತೆ ಕಾಣುತ್ತಿಲ್ಲ.
ಏಕೆ ಹೀಗೆ ಎಂದು ಯೋಚಿಸುತ್ತಿದ್ದೀರಾ? ಹೌದು! ಬಿಎಂಟಿಸಿಯಲ್ಲಿ ವಜಾ ಮಾಡಿರುವ ಅನೇಕ ನೌಕರರಿಗೆ ಬಿಎಂಟಿಸಿ ನಿಗಮದ ಆನ್‌ಲೈನ್ ರಜೆನಿರ್ವಾಹಣಾ ವ್ಯವಸ್ಥೆ ಆಪ್‌ನಲ್ಲಿ ನಿಮ್ಮ ಆದ್ಯತೆಯ ಆಯ್ಕೆಯ ಪ್ರಕಾರ, ದಿನಾಂಕ 10-09-2021ರ ಹಬ್ಬದ ರಜೆಯನ್ನು ಅನುಮೋದಿಸಲಾಗಿದೆ From BMTC ಎಂದು ಎಸ್‌ಎಂಎಸ್ ಮಾಡಲಾಗಿದೆ.
ಬಿಎಂಟಿಸಿಯ ಅಧಿಕಾರಿಗಳು ಕಳೆದ ಏಪ್ರಿಲ್‌ನಲ್ಲಿ ನಮ್ಮನ್ನು ವಜಾಗೊಳಿಸಿದ್ದಾರೆ. ಆದರೂ ನಮಗೆ ಹಬ್ಬದ ರಜೆಯನ್ನು ಅನುಮೋದಿಸಲಾಗಿದೆ ಎಂದು ಎಸ್‌ಎಂಎಸ್ ಕಳುಹಿಸಿದ್ದಾರೆ. ಅಂದರೆ ನಮ್ಮನ್ನು ವಜಾ ಮಾಡಿದ ಆದೇಶವನ್ನು ಹಿಂತೆಗೆದುಕೊಳ್ಳಲಾಗಿದೆಯೇ ಎಂದು ವಜಾಗೊಂಡಿರುವ ಹಲವಾರು ನೌಕರರು ಈಗ ಗೊಂದಲದಲ್ಲಿ ಸಿಲುಕಿದ್ದಾರೆ.
ಈ ಬಗ್ಗೆ ಸಂಬಂಧಪಟ್ಟ ಘಟಕದ ವ್ಯವಸ್ಥಾಪಕರಿಗೆ ನೌಕರರು ಫೋನ್ ಮೂಲಕ ವಿಷಯ ತಿಳಿಸಿದರೆ. ನಿಮ್ಮ ವಜಾ ಆದೇಶವನ್ನು ಹಿಂಪಡೆದಿಲ್ಲ ಎಂದು ಹೇಳಿದ್ದಾರೆ. ಮತ್ತೆ ಹಬ್ಬದ ರಜೆಯನ್ನು ಅನುಮೋದಿಸಲಾಗಿದೆ ಎಂದು ಎಸ್‌ಎಂಎಸ್ ಬಂದಿದೆಯಲ್ಲ ಎಂದು ಕೇಳಿದರೆ ಅದು ನನಗೆ ಗೊತ್ತಿಲ್ಲ ನೀವು ಕೇಂದ್ರ ಕಚೇರಿಯಲ್ಲಿ ವಿಚಾರಿಕೊಳ್ಳಿ ಎಂದು ಹೇಳಿದ್ದಾರೆ.
ನಿಗಮಗಳಲ್ಲಿ ಪ್ರಸ್ತುತ ಮಹಿಳಾ ನೌಕರರು ಸೇರಿದಂತೆ ಸೇವೆ ಸಲ್ಲಿಸುತ್ತಿರುವ ಅನೇಕರಿಗೆ ಹಬ್ಬದ ರಜೆಯನ್ನು ಅನುಮೋದಿಸಿಲ್ಲ. ಆದರೆ ವಜಾ ಮಾಡಿರುವ ನೌಕರರಿಗೆ ರಜೆ ಅನುಮೋದಿಸಲಾಗಿದೆ ಎಂದು ಮೆಸೇಜ್ ಕಳುಹಿಸಿ ಬಿಎಂಟಿಸಿ ಎಡವಟ್ಟು ಮಾಡಿಕೊಂಡಿದೆ.
ಹಬ್ಬದ ರಜೆಯನ್ನು ಅನುಮೋದಿಸಲಾಗಿದೆ ಎಂದು ಮೆಸೇಜ್ ಬಂದಿರುವುದನ್ನು ನೋಡಿ ವಜಾಗೊಂಡಿರುವ ಹಲವು ನೌಕರರು ಡಿಪೋಗಳ ವ್ಯವಸ್ಥಾಪಕರು ವಜಾ ಮಾಡಿಸಿದ್ದಾರೆ. ಅದರೆ, ಅವರಿಗೇ ಗೊತ್ತಿಲ್ಲ ನಾವು ಯಾರುಯಾರನ್ನು ವಜಾ ಮಾಡಲು ಪಟ್ಟಿ ಕಳುಹಿಸಿದ್ದೇವೆಂದು. ಇನ್ನು ಇಂಥ ಅಧಿಕಾರಿಗಳ ಮಾತು ನಂಬಿ ನಮ್ಮ ಕೇಂದ್ರ ಕಚೇರಿಯಲ್ಲಿರುವ ಅಧಿಕಾರಿಗಳು ನಾವು ಮಾಡದ ತಪ್ಪಿಗೆ ಶಿಕ್ಷೆ ನೀಡಿದ್ದಾರೆ ಎಂದು ನೋವಿನಿಂದ ಹೇಳುತ್ತಿದ್ದಾರೆ.
ಅದು ಏನೆ ಇರಲಿ ಇಂಥ ಬೇಜಾವಾಬ್ದಾರಿ ಅಧಿಕಾರಿಗಳ ನಡೆಯಿಂದ ತಮ್ಮ ಬೇಡಿಕೆಗಳ ಪೂರೈಸಿಕೊಳ್ಳಲು ಮಾಡಿದ ಹೋರಾಟದ ಫಲ ಎಂಬಂತೆ ನೌಕರರ ವಜಾ, ಅಮಾನತು, ದೂರದೂರಿಗೆ ವರ್ಗಾವಣೆ ಜತೆಗೆ ಪೊಲೀಸ್ ಪ್ರಕರಣಗಳನ್ನು ಅನುಭವಿಸುವಂತಾಗಿರುವುದು ಮಾತ್ರ ವಿಪರ್ಯಾಸ.