ಒಂದು ಅಧ್ಬುತವಾದ ಸುಂದರ ಪೌರಾಣಿಕ ನಾಟಕವೊಂದು ಮುಗಿದುಹೋಗುತ್ತದೆ, ಅಷ್ಟು ಹೊತ್ತಿನ ತನಕ ನಾಟಕದಲ್ಲಿ ರಾಜನಾಗಿ, ದೇವರಾಗಿ ಮೆರೆದ ಕಲಾವಿದನೊಬ್ಬ ಜನರು ತಟ್ಟಿದ ಚಪ್ಪಾಳೆ, ಸಿಳ್ಳೆಗಳು ಮುಗಿದ ಬಳಿಕ… ತನ್ನ ಮುಖದ ಬಣ್ಣ ಒರೆಸಿಕೊಂಡು ಪಾತ್ರದ ಬಟ್ಟೆಗಳನ್ನು ಕಳಚಿದ ಮೇಲೆ ತನ್ನ ಕಾಲರ್ ಹರಿದ ಬಣ್ಣ ಮಾಸಿದ ಬಟ್ಟೆ ಧರಿಸಿಕೊಳ್ಳುತ್ತಾನೆ.
ಓಹೋ ಪ್ರೆಸ್ಸು….ಎನ್ ಸರ್ ನಿಮ್ದೆಲ್ಲಾ ಇಲ್ಲದ ಭಯ ಹುಟ್ಟಿಸೋದು, ಜನರನ್ನು ಯಾಮಾರಿಸೋದು, ಯಾವದೋ ಪಕ್ಷದ ಪರವಾಗಿ ಪ್ರಮೋಟ್ ಮಾಡೋದು, ಜನಗಳ ನಡುವೆ ಜಗಳಾ ಹಚ್ಚೋದು ಇನ್ನು ಯಾರದೋ ಬೂಟು ನೆಕ್ಕೋದು ಅಂತೆಲ್ಲ ಮಾತನಾಡುವ ಜನರೇ ನಿಮ್ಮ ಮಾತು ನಿಜವೇ?.. ಪತ್ರಕರ್ತರು ಕೂಡ ಮನುಷ್ಯರು ಅವರಲ್ಲೂ ಮಾನವೀಯತೆ ಇದೆ ಅವರಿಗೂ ಸಂಸಾರ, ಕುಟುಂಬ ಇದೆ ಅವರಿಗೂ ತಾಪತ್ರೆಯ ತೊಂದರೆಗಳಿವೆ ಅಂತ ಯಾವತ್ತಾದರೂ ಯೋಚಿಸಿದ್ದೀರಾ?? ಎಲ್ಲೋ ಒಂದು ಕಡೆ ಪತ್ರಿಕಾ ರಂಗ ಪತ್ರಿಕೋದ್ಯಮ ಆಗುವಂತೆ ಮಾಡಿದ ಪ್ರಾಯಶ್ಚಿತ ನಿಮ್ಮನ್ನು ಕಾಡುವುದೆ ಇಲ್ಲವಾ??
ಮಳೆ ಗಾಳಿ ಚಳಿ ಯಾವುದನ್ನೂ ಲೆಕ್ಕಿಸದೆ ತಿಂಗಳಿಗೆ ಸಿಗುವ ಎರಡು ಸಾವಿರ ಹಣಕ್ಕಾಗಿ ನಸುಕಿನ ನಾಲ್ಕು ಗಂಟೆಗೆ ಮನೆಯಿಂದ ಹೊರಟು ಪತ್ರಿಕೆ ಹಂಚುವ ಹುಡುಗರಿಂದ ಹಿಡಿದು, ರಾತ್ರಿ ನಿದ್ದೆಗೆಟ್ಟು ವಾಹನ ಚಲಾಯಿಸಿ ಜಿಲ್ಲೆಗಳಿಂದ ನಿಮ್ಮ ದೂರದ ಊರುಗಳಿಗೆ ಪತ್ರಿಕೆಯ ಬಂಡಲ್ ತಲುಪಿಸುವ ವಾಹನ ಚಾಲಕ, ಅದರ ಆಚೆಗೆಲ್ಲೋ ರಾತ್ರಿಎಲ್ಲ ನಿದ್ದೆಗೆಟ್ಟು ಎಡಿಟ್ ಮಾಡುವ ಎಡಿಟರ್ ಗಳು, ಮಾನವೀಯ ಕಳಕಳಿಯ ವರದಿ ಮಾಡಿ ನಿರ್ಗತಿಕ ಕುಟುಂಬಕ್ಕೆ ಲಾಕ್ ಡೌನ್ ಸಮಯದಲ್ಲಿ ಪಡಿತರ ಕೊಡಿಸುವ ಪತ್ರಕರ್ತರು ನಿಮಗೆ ಕಾಣಿಸುವದೇ ಇಲ್ಲವಾ?
ಕೊರೊನಾ ಹಬ್ಬುತ್ತಿದೆ ಜನ ಸಾಯ್ತಾ ಇದ್ದಾರೆ ಹುಷಾರು ಅಂತ ಹೇಳಿದ್ದಕ್ಕೆ ಭಯ ಹುಟ್ಟಿಸುತ್ತಿರುವ ಮಾಧ್ಯಮಗಳು ಅನ್ನೋದು, ಪೊಲೀಸರು ಜನರನ್ನ ರಸ್ತೆಗೆ ಬಿಟ್ಟಿದ್ದಾರೆ ಅಂತ ವರದಿ ಮಾಡಿ ಲಾಠಿ ಬೀಸುವಂತೆ ಮಾಡಿದ್ದರೂ ಕೂಡ ಅದರ ಹಿಂದಿನ ಉದ್ದೇಶ ಕೊರೊನಾದಿಂದ ಆಗುವ ಸಾವುನೋವುಗಳನ್ನು ತಡೆಯುವುದು ಮತ್ತು ಕೊರೊನಾ ಹರಡದಂತೆ ತಡೆಯುವುದು ಅಂತ ನಿಮಗೆ ಅರ್ಥವಾಗುವುದು ಯಾವಾಗ?
ಕೈಯ್ಯಲ್ಲಿ ಎಲ್ಲ ಬೆರಳುಗಳು ಸಮನಾಗಿ ಇರುವುದಿಲ್ಲ ಅನ್ನುವುದು ಬಹಳ ಜನರಿಗೆ ತಿಳಿಯದೆ ಇರುವುದು ಸಮಾಜಮುಖಿ ಪತ್ರಕರ್ತರನ್ನು ಹಿಮ್ಮೆಟ್ಟಿಸುವಂತೆ ಮಾಡಿದೆ. ಎಷ್ಟೋ ಸಲ ಸತ್ಯನಿಷ್ಠ ವರದಿಗೆ ತೆರಳಿದಾಗ ರಾಜಕಾರಣಿಗಳ ಚೇಲಾಗಳಿಂದಲೋ ಅಥವಾ ಮರಿ ಪುಡಾರಿಗಳಿಂದಲೋ ಪತ್ರಕರ್ತರು ಹಲ್ಲೆಗೆ ಒಳಗಾದ ಉದಾಹರಣೆಗಳಿವೆ. ಅಷ್ಟೇ ಏಕೆ ಕೊರೊನಾದಿಂದ ಆಗುತ್ತಿರುವ ಅನಾಹುತಗಳ ವರದಿ ಮಾಡಿಯೇ ಕೊರೊನಾ ಅಂಟಿಸಿಕೊಂಡ ದುರಂತಕತೆಗಳೂ ಇವೆ.
ಮನೆಯಲ್ಲೇ ಇರಿ, ಅಗತ್ಯ ಬಿದ್ದಾಗ ಚಿಕಿತ್ಸೆ ಪಡೆಯಿರಿ, ಮಾಸ್ಕ್ ಧರಿಸಿ ಅನ್ನುವ ಪತ್ರಕರ್ತರು ವರದಿ ಮಾಡಲು ಹೊರಗೆ ಬರಲೇಬೇಕು ಅನ್ನುವ ಕನಿಷ್ಠ ಜ್ಞಾನವೂ ಇಲ್ಲದ ಕೆಲವರು ನಮಗೆ ಹೇಳುವ ನೀವೂ ಕೂಡ ಮನೆಯಲ್ಲಿ ಇರಿ ಎಂದು ಪುಸಕ್ಕನೆ ನಗುವಾಗ ನಮ್ಮ ಹೊಟ್ಟೆಯಲ್ಲಿ ಖಾರ ಕಲಿಸಿದಂತೆ ಆಗದೆ ಇರಲು ಹೇಗೆ ಸಾಧ್ಯ?
ಅಂದ ಹಾಗೆ ಕೊರೊನಾ ಮತ್ತು ಲಾಕ್ ಡೌನ್ ಇಂದಾಗಿ ಪತ್ರಿಕೆ ಹಂಚುವ ಹುಡುಗರು ಕೆಲಸವಿಲ್ಲದೆ ಸಂಬಳ ಇಲ್ಲದೆ ಬದುಕುವುದು ಕಷ್ಟವಾಗಿದೆ. ಅಕ್ಷರಗಳ ಲೆಕ್ಕದಲ್ಲಿ ಅಬ್ಬಬ್ಬಾ ಅಂದರೆ ಐದಾರು ಸಾವಿರ ಗೌರವ ಧನ ಪಡೆಯುತ್ತಿದ್ದ ಪತ್ರಕರ್ತರು ಮತ್ತು ಹಂಚಿಕೆದಾರರು ಎಂಟಾಣೆ, ಒಂದು ರೂಪಾಯಿ ಲೆಕ್ಕದಲ್ಲಿ ತಿಂಗಳಿಗೆ ಸಿಗುತ್ತಿದ್ದ ಕಮೀಷನ್ ವಂಚಿತರಾಗುವಂತಾಗಿ ಹಲವು ಪತ್ರಕರ್ತರ ಕುಟುಂಬಗಳೂ ಸದ್ಯ ಸಂಕಷ್ಟದಲ್ಲಿ ಇವೆ.
ಯಾರೋ ಯಾರ ಬಗ್ಗೆಯೋ ಮಾಹಿತಿ ಕೊರತೆಯಿಂದ, ಅಥವಾ ಕಮ್ಯೂನಿಕೇಷನ್ ಗ್ಯಾಪಿನಿಂದ ತಪ್ಪಾಗಿ ವರದಿ ಮಾಡಿರಬಹುದು ಅಥವಾ ಪತ್ರಕರ್ತ ಕಳಿಸಿದ ವರದಿಯ ಉದ್ದೇಶವನ್ನೆ ತಿಳಿಯದೆ ಆಫಿಸಿನವರು ಸುದ್ದಿಗಳನ್ನು ತಿರುಚಿರಲೂ ಬಹುದು ಅಲ್ಲವೇ?
ನಿಮ್ಮ ಮಾತನ್ನ ಖಂಡಿತ ಒಪ್ಪೋಣ ಎಲ್ಲರೂ ಸಾಚಾಗಳಲ್ಲ ನಿಜ ಆದರೆ ಕೆಲವರಾದರೂ ಒಳ್ಳೆಯ ಮನಸ್ಸಿನವರು, ಸಾಮಾಜಿಕ ಕಳಕಳಿಯ ಪತ್ರಕರ್ತರು ಇರಬಹುದಲ್ಲ. ಹಲವು ಕಾರ್ಯಕ್ರಮಗಳಲ್ಲಿ ಸ್ಟೇಜ್‌ಗಳ ಪಕ್ಕದಲ್ಲಿ ಪತ್ರಕರ್ತರಿಗೆ ಕುರ್ಚಿಗಳನ್ನು ಮೀಸಲು ಇರಿಸಿದಾಗಲೂ ಉದ್ದಟತನದಿಂದ ಬಂದು ಕುಳಿತ ಬೇರೆಯವರನ್ನು ಎಬ್ಬಿಸದೆ ನಿಂತುಕೊಂಡೆ ವರದಿ ಮಾಡುವ ಪತ್ರಕರ್ತರ ಬಗ್ಗೆ ಅಸಡ್ಡೆಯ ಮಾತುಗಳು ನಿಮಗೆ ಸರಿ ಅನ್ನಿಸುತ್ತವಾ?
ಕೆಲವು ಚಾನಲ್ ಗಳು ಟಿಆರ್ ಪಿಗಾಗಿ ಏನನ್ನೋ ಮಾಡುತ್ತಿರಬಹುದು, ಕೆಲವು ಪತ್ರಿಕೆಗಳು ಪಕ್ಷಗಳ ಸಿದ್ಧಾಂತ ನಿಲುವುಗಳಿಗೆ ಏಣಿ ಹಾಕುತ್ತಿರಬಹುದು. ಆದರೆ ಬದುಕುವುದಕ್ಕಾಗಿ ಅಥವಾ ಹೊಟ್ಟೆ ಹೊರೆಯುವುದಕ್ಕಾಗಿ ಪತ್ರಿಕೋದ್ಯಮಕ್ಕೆ ಬಂದವರಿಗಿಂತ ಹೆಚ್ಚಾಗಿ ಸಮಾಜದ ತಪ್ಪುಗಳನ್ನು ತಿದ್ದುವುದಕ್ಕಾಗಿ ಬಂದ ಹಲವು ಪತ್ರಕರ್ತರು ಭ್ರಮನಿರಸನವಾಗುವಂತೆ ಅವರ ನಂಬಿಕೆಗಳು ಕುಸಿದು ಹೋಗುವಂತೆ ಕುಹಕದ ಮಾತನಾಡಿ ಆತ್ಮಸ್ಥೈರ್ಯ ತಗ್ಗಿಸುವ ಜನರಿಂದಾಗಿ ಇಂದು ಪತ್ರಿಕಾರಂಗ ಒಂದು ಉದ್ದಿಮೆ ಆಗುತ್ತಿದೆ.
ಇನ್ನು ಖರ್ಚು ವೆಚ್ಚಗಳನ್ನು ಭರಿಸುವುದಕ್ಕಾಗಿ, ಸಿಬ್ಬಂದಿಗಳ ಸಂಬಳ ತೇಲಿಸುವುದಕ್ಕಾಗಿ ಜಾಹೀರಾತು ಕೇಳಿದರೆ ಅದರ ಹಣವನ್ನು ಕೊಡಲು ತಿಂಗಳುಗಟ್ಟಲೆ ಅಲೆದಾಡಿಸುವ ಕಂಪನಿಗಳು ಮತ್ತು ಜನರು ಇರುವ ಸಮಯದಲ್ಲಿ ಎಷ್ಟೋ ಪತ್ರಿಕೆಗಳು ನಿಂತು ಹೋಗುವ ಸ್ಥಿತಿ ತಲುಪಿದ್ದರೆ, ಹಲವು ಚಾನಲ್‌ಗಳು ವರ್ಷಗಳಿಂದ ಸಂಬಳವನ್ನು ಕೊಡದೆ ದುಡಿಸಿಕೊಳ್ಳುತ್ತಿವೆ. ಆದರೂ ಇಂದಲ್ಲ ನಾಳೆ ಸಂಬಳ ಬರುವ ನಿರೀಕ್ಷೆಯಲ್ಲೆ ಎಲ್ಲ ನೋವನ್ನು ನುಂಗಿಕೊಂಡು ಯಾರಿಗೂ ತೋರಗೊಡದೆ ಮತ್ತೆ ವರದಿಗೆ ತೆರಳುವ ಪತ್ರಕರ್ತರ ಬದುಕಿನ ಭವನೆಗಳು ಯಾವ ಲೆಕ್ಕ ಅನ್ನುವಂತಾಗಿರುವುದು ವಿಪರ್ಯಾಸವೆ ಸರಿ.
ಯಾರೋ ಒಬ್ಬರು ಮಾಡುವ ತಪ್ಪಿಗೆ ಇಡೀ ಪತ್ರಿಕಾ ರಂಗವನ್ನೆ ಕೀಳಾಗಿ ಕಾಣುವ ಸಣ್ಣತನ ಕೊನೆಯಾಗಲಿ ಅನ್ನುವ ಆಸೆಯೊಂದಿಗೆ ಈ ಲೇಖನವನ್ನು ಓದಿದ ಮೇಲೆ ಕೆಲವರ ಅಭಿಪ್ರಾಯವಾದರೂ ಬದಲಾದೀತು ಅನ್ನುವ ನಂಬಿಕೆಯೊಂದಿಗೆ ವಿರಾಮ ಹೇಳುತ್ತಿದ್ದೇನೆ.
ನಿಮ್ಮ ದೀಪಕ ಶಿಂಧೇ
ಫೋನ್- 9482766018