ಉಡುಪಿ: ರಂಗಸ್ಥಳದಲ್ಲಿ ಯಕ್ಷಗಾನ ಪ್ರದರ್ಶನ ನೀಡುತ್ತಿದ್ದ ವೇಳೆ ಹೃದಯಾಘಾತಕ್ಕೀಡಾಗಿ ಕಲಾವಿದನೊಬ್ಬ ಇಹಲೋಕ ತ್ಯಜಿಸಿರುವ ಘಟನೆ ಉಡುಪಿ ಜಿಲ್ಲೆ ಬ್ರಹ್ಮಾವರದ ಶಿರಿಯಾರದಲ್ಲಿರುವ ಕಾಜ್ರಲ್ಲಿ ಸಮೀಪದ ಕಲ್ಕಟ್ಟೆಯಲ್ಲಿ ನಡೆದಿದೆ.
ಮಂದರ್ತಿ ಮೇಳದ ಪ್ರಧಾನ ವೇಷಧಾರಿ ಸಾಧು ಕೊಠಾರಿ (58) ಇಂದು ಮುಂಜಾನೆ ರಂಗಸ್ಥಳದಲ್ಲೇ ನಿಧನರಾದ ಕಲಾವಿದ.
ಇಂದು ನಸುಕಿನ 3 ಗಂಟೆ ಸುಮಾರಿಗೆ ಅವರು ವೇದಿಕೆಯಲ್ಲಿ ಮಹಾಕಲಿ ಮಗಧೇಂದ್ರ ಪ್ರಸಂಗದಲ್ಲಿ ಮಾಗಧನಾಗಿ ಪ್ರದರ್ಶನ ನೀಡುತ್ತಿದ್ದಾಗ ಎದೆನೋವು ಕಾಣಿಸಿಕೊಂಡಿದೆ. ಈ ವೇಳೆ ಅವರು ಅಲ್ಲೇ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದರು.
ಅವರು ರಂಗಸ್ಥಳದಲ್ಲೇ ಕುಸಿದು ಬಿದ್ದರು. ಕೂಡಲೇ ನಾವು ಅವರ ವೇಷದ ನಿಲುವಂಗಿಯನ್ನು ತೆಗೆದು ಆಸ್ಪತ್ರೆಗೆ ಕರೆದುಕೊಂಡು ಬಂದೆವು ಆದರೂ ಅವರನ್ನು ಉಳಿಸಿಕೊಳ್ಳಲು ಆಗಲಿಲ್ಲ ಎಂದು ಮೇಳದ ಮುಖ್ಯ ಭಾಗವತ, ಯಕ್ಷಗಾನ ತಂಡ ವ್ಯವಸ್ಥಾಪಕ ಸದಾಶಿವ ಅಮೀನ್ ತಿಳಿಸಿದ್ದಾರೆ.
ಕೊಠಾರಿ ಕುಟುಂಬದೊಂದಿಗೆ ಬಾರ್ಕೂರ್‌ನಲ್ಲಿ ನೆಲೆಸಿದ್ದರು, ಬಟಗು ತಿಟ್ಟು ಯಕ್ಷಗಾನ ಕಲೆಯ ಅತ್ಯುತ್ತಮ ಕಲಾವಿದರಲ್ಲಿ ಒಬ್ಬರಾಗಿ ಕೊಠಾರಿಯವರು ಹೆಸುರು ಮಾಡಿದ್ದರು. ಕಳೆದ ನಾಲ್ಕು ದಶಕಗಳಿಂದ ಅವರು ಯಕ್ಷಗಾನ ಪ್ರದರ್ಶನ ನೀಡುತ್ತಾ ಬಂದಿದ್ದರು ಎಂದು ತಿಳಿಸಿದ್ದಾರೆ.
ಕಲಾವಿದನ ಅಕಾಲಿಕ ಸಾವಿಗೆ ಸಮಸ್ತ ಕಲಾವಿದರು ಮತ್ತು ವಿವಿಧ ಕ್ಷೇತ್ರದ ಗಣ್ಯರು ಕಂಬನಿ ಮಿಡಿದಿದ್ದಾರೆ.