ಬೆಂಗಳೂರು: ಇತ್ತೀಚೆಗಷ್ಟೇ ಕನ್ನಡ ಚಿತ್ರರಂಗ ಹಾಸ್ಯನಟ ಬುಲೇಟ್ ಪ್ರಕಾಶ್ ಅವರನ್ನು ಕಳೆದುಕೊಂಡಿತ್ತು. ಈಗ ಮತ್ತೊಬ್ಬ ಹಿರಿಯ ಹಾಸ್ಯ ಕಲಾವಿದ ಮಿಮಿಕ್ರಿ ರಾಜಗೋಪಾಲ್ (69) ಅವರನ್ನು ಗುರುವಾರ ಕಳೆದುಕೊಂಡಿದೆ.
650ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳಿಗೆ ಹಾಸ್ಯದೂಟ ಬಡಿಸಿದ ನಟ ರಾಜಗೋಪಾಲ್ ನಿಧನರಾಗಿದ್ದು, ಈ ಮೂಲಕ ಕನ್ನಡ ಚಿತ್ರರಂಗದಲ್ಲಿ ಅನಾಥಭಾವ ಮೂಡಿದೆ.
ಕಿಡ್ನಿ ಮತ್ತು ಅಸ್ತಮಾ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಕೆಂಗೇರಿಯ ಅವರ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕನ್ನಡ ಹಾಗೂ ಇತರ ಭಾಷೆಗಳಲ್ಲಿ ಹಾಸ್ಯ, ಪೋಷಕ ನಟನಾಗಿ ಅಭಿನಯಿಸಿದ್ದಾರೆ. ತಮಿಳು ಚಿತ್ರಗಳಲ್ಲಿಯೂ ಬಣ್ಣ ಹಚ್ಚಿದ್ದ ರಾಜಗೋಪಾಲ್ ಅವರ ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿದಿದೆ.
1983ರಿಂದ ಸಿನಿಮಾದಲ್ಲಿ ಅಭಿನಯಿಸಲು ಆರಂಭಿಸಿದ ಅವರು ಡಿಡಿ ಒನ್ ಆರಂಭವಾದಾಗಿನಿಂದ ಪಾಪ ಪಾಂಡು ವರೆಗೂ ಹಲವು ಧಾರಾವಾಹಿಗಳಲ್ಲಿ ನಟಿಸಿ ತಮ್ಮ ಜನಪ್ರೀಯತೆಯನ್ನು ಇನ್ನಷ್ಟು ಎತ್ತರಕ್ಕೆ ಏರಿಸಿಕೊಂಡರು.
ಹಲವು ಕಲಾವಿದರ ಧ್ವನಿಗಳನ್ನು ಅನುಕರಣೆ ಮಾಡುವುದರಲ್ಲಿ ಪರಿಣಿತರಾಗಿದ್ದ ಮಿಮಿಕ್ರಿ ರಾಜಗೋಪಾಲ್ ನಟಿ ಕಲ್ಪನಾ ಧ್ವನಿಯನ್ನು ಅನುಕರಣೆ ಮಾಡುವುದರಲ್ಲಿ ಬಹಳ ನಿಪುಣರಾಗಿದ್ದರು. ಜತೆಗೆ. ಕಲ್ಪನಾ ಅವರ ಧ್ವನಿಯನ್ನು ಅನುಕರಿಸಿದ್ದರಿಂದಲೇ ಹೆಚ್ಚು ಜನಪ್ರಿಯರಾಗಿದ್ದ ಅವರು ಗೋಸಿ ಗ್ಯಾಂಗ್, ಸೂಪರ್ ಪೊಲೀಸ್, ಕಾಪಿಕಟ್ಟಿ, ರಿಯಲ್ ಪೊಲೀಸ್, ಸಾಧಕರು ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.