ಬೆಂಗಳೂರು: ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಉಂಟಾಗಿರುವ ಲಾಕ್ ಡೌನ್ ಅವಧಿಯಲ್ಲಿ ಸರ್ಕಾರಿ ಮತ್ತು ಖಾಸಗಿ ವಸತಿ ನಿಲಯಗಳಲ್ಲಿ ತಂಗಿದ್ದ ವಿದ್ಯಾರ್ಥಿಗಳು ನಗರ ಪ್ರದೇಶದಲ್ಲಿ ತಾತ್ಕಾಲಿಕವಾಗಿ ವಾಸವಾಗಿದ್ದ ವಲಸೆ ಕಾರ್ಮಿಕರ ಮಕ್ಕಳು ತಮ್ಮ ಊರುಗಳಿಗೆ ವಾಪಸ್ ತೆರಳಿದ್ದಾರೆ. ಇಂತಹ ವಿದ್ಯಾರ್ಥಿಗಳು ವಾಸ ಇರುವ ಸ್ಥಳಕ್ಕೆ ಹತ್ತಿರದ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರದ ಬದಲಾವಣೆಗೆ ಅವಕಾಶ ಕಲ್ಪಿಸಲಾಗಿದೆ. ಅದರಲ್ಲಿ 12674 ವಿದ್ಯಾರ್ಥಿಗಳು ಕೇಂದ್ರ ಬದಲಾವಣೆ ಮಾಡಿಕೊಂಡಿದ್ದಾರೆ.
ಇನ್ನು ರಾಜ್ಯಾದ್ಯಂತ ಒಟ್ಟು 34 ಶೈಕ್ಷಣಿಕ ಜಿಲ್ಲಾ ಕೇಂದ್ರಗಳಲ್ಲಿ ಮತ್ತು 204 ತಾಲ್ಲೂಕು ಕೇಂದ್ರಗಳಲ್ಲಿ ಸಹಾಯವಾಣಿ ಕೇಂದ್ರ ತೆರೆಯಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ 200 ಮಕ್ಕಳಿಗೆ ಒಂದರಂತೆ 3209 (2879+330 ಬ್ಲಾಕ್ ಸೆಂಟರ್ಗಳು) ಕೇಂದ್ರಗಳಿಗೆ ಒಟ್ಟಾರೆ 5755 ಆರೋಗ್ಯ ತಪಾಸಣಾ ಕೌಂಟರ್ಗಳನ್ನು ಪರೀಕ್ಷಾ ಕೇಂದ್ರದ ಮುಖ್ಯ ದ್ವಾರದಲ್ಲಿ ಸ್ಥಾಪಿಸಲಾಗಿದೆ
ಕಂಟೇನ್ಮೆಂಟ್ ಹಾಗೂ ಸೀಲ್ಡೌನ್ ಇರುವಂತಹ ಪ್ರದೇಶಗಳ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಸಾಧ್ಯವಾಗದಿದ್ದರೆ, ಅಂತಹ ವಿದ್ಯಾರ್ಥಿಗಳಿಗೆ ಆಗಸ್ಟ್ನಲ್ಲಿ ಮತ್ತೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು. ಆದರೆ, ರಾಜ್ಯಾದ್ಯಂತ ಜೂನ್ 25ರಿಂದ, ಜುಲೈ 4ರವೆರೆಗೆ ನಿಗದಿತ ವೇಳಾಪಟ್ಟಿಗೆ ಅನುಗುಣವಾಗಿ ಪರೀಕ್ಷೆ ನಡೆಯಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
ಬುಧವಾರ ಬೆಂಗಳೂರಿನ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ತಜ್ಞ ಸಮಿತಿ ಸೂಚನೆ ಪ್ರಕಾರವೇ ಪರೀಕ್ಷೆ ನಡೆಸಲಾಗುತ್ತಿದೆ. ಒಂದು ಕೊಠಡಿಯಲ್ಲಿ 15-18 ಮಕ್ಕಳಷ್ಟೆ ಕೂರುತ್ತಾರೆ. ಪ್ರತಿ ಮಗುವಿನ ನಡುವೆ ಮೂರರಿಂದ ಮೂರೂವರೆ ಅಡಿ ಅಂತರ ಕಾಯ್ದುಕೊಳ್ಳಲಾಗುತ್ತದೆ ಎಂದು ಹೇಳಿದರು.
ಆಗಸ್ಟ್ನಲ್ಲಿ ಬರೆದರೂ ಫ್ರೆಶ್ ಎಂದೇ ಪರಿಗಣನೆ
ಕಂಟೈನ್ಮೆಂಟ್ ಜೋನ್ನಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಮುಂದಾಗದಿದ್ದರೆ, ಅವರಿಗೆ ಆಗಸ್ಟ್ನಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು. ಅವರನ್ನೂ ಕೂಡ ಫ್ರೆಶ್ ಅಭ್ಯರ್ಥಿಗಳೆಂದೇ ಪರಿಗಣಿಸಲಾಗುತ್ತದೆ. ಬೆಳಗ್ಗೆ 7:30 ಯಿಂದಲೇ ಪರೀಕ್ಷಾ ಕೇಂದ್ರ ತೆರೆದಿರುತ್ತದೆ. ವಿದ್ಯಾರ್ಥಿಗಳು ಬೇಗನೆ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ತಪಾಸಣೆ ಮಾಡಿಸಿಕೊಳ್ಳಬೇಕು. ಜ್ವರ, ಕೆಮ್ಮು, ನೆಗಡೆಯಂತಹ ಲಕ್ಷಣಗಳುಳ್ಳ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ ಎಂದು ಹೇಳಿದರು.
8,48,203 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ನೋಂದಣಿ
ರಾಜ್ಯಾದ್ಯಂತ ಈ ಬಾರಿ 8,48,203 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿದ್ದಾರೆ. ಅದರಲ್ಲಿ 7,64,226 ಹೊಸಬರು, 54,002 ಪುನರಾವರ್ತಿತ, 20,893 ಖಾಸಗಿ, 8,605 ಖಾಸಗಿ ಪುನರಾವರ್ತಿತ ಮತ್ತು 453 ಮಂದಿ ಇತರ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಪರೀಕ್ಷೆಗೆ ಹಾಜರಾಗುವ ಲಿಂಗವಾರು ವಿದ್ಯಾರ್ಥಿಗಳು
ಗಂಡು 4,48,560. ಹೆಣ್ಣು-3,99,643.
ಪರೀಕ್ಷೆಗೆ ಹಾಜರಾಗುವ ಶಾಲಾ ವಿಧವಾರು
ಸರ್ಕಾರಿ ಶಾಲೆ 3,31,652, ಅನುದಾನಿತ-2,29,381, ಅನುದಾನ ರಹಿತ- 2,87,170. ಇದರಲ್ಲಿ ನಗರ ಪ್ರದೇಶದ 3,78,337 ಮತ್ತು ಗ್ರಾಮೀಣ ಪ್ರದೇಶದ 4,69,866 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.