ಬೆಂಗಳೂರು: ಆಸ್ತಿಗಾಗಿ ಚಿಕ್ಕಪ್ಪನೊಂದಿಗೆ ಸೇರಿ ಪುತ್ರನೇ ತನ್ನ ತಂದೆಯನ್ನು ಕೊಲೆ ಮಾಡಿದ ಪ್ರಕರಣವನ್ನು ಭೇದಿಸುವಲ್ಲಿ ತಲಘಟ್ಟಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಫೆಬ್ರವರಿ 14ರಂದು ನಡೆದ ಬಳ್ಳಾರಿಯ ಸ್ಟೀಲ್ ಆಂಡ್ ಅಲೈ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸಿಂಗನಮನ ಮಾಧವ ಅವರ ಸುಪಾರಿ ಹಂತಕರಾದ ಗೋವಾದ ಮಡಗಾಂ ನಗರದ ಮೀನು ವ್ಯಾಪಾರಿ ರಿಯಾಜ್ ಅಬ್ದುಲ್ ಶೇಖ್ (40), ಯಲಹಂಕ ಕೋಗಿಲು ಕ್ರಾಸ್ ನಲ್ಲಿ ಮೊಬೈಲ್ ಸರ್ವೀಸ್ ಕೆಲಸ ಮಾಡುವ ಶಹಬಾಜ್ (23), ಗೋವಾದ ಮಡಗಾಂ ಕಾರೆವಾನ್‌ನ ಕಾರ್ಪೆಂಟರ್ ಶಾರೂಕ್ ಮನ್ಸೂರ್ (24), ಯಶವಂತಪುರದ ಬಿ.ಕೆ.ನಗರ ಆಟೋ ಚಾಲಕ ಆದಿಲ್ ಖಾನ್ (28), ಶಾಮಣ್ಣ ಗಾರ್ಡನ್‌ನಲ್ಲಿ ಕಾರ್ಪೆಂಟರ್ ಸಲ್ಮಾನ್ (24) ಬಂಧಿತರು.
ಪ್ರಮುಖ ಆರೋಪಿಗಳಾದ ಮಾಧವ ಅವರ ಸಹೋದರ ಶಿವರಾಮ್ ಪ್ರಸಾದ್ ಹಾಗೂ ಕಿರಿಯ ಮಗ ಹರಿಕೃಷ್ಣ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆಯ ಹಿನ್ನೆಲೆ:
ಬಳ್ಳಾರಿಯ ನಿವಾಸಿ ಸಿಂಗನಮನ ಮಾಧವ ಅವರು ಉದ್ಯಮಿಯಾಗಿದ್ದು, ಬಳ್ಳಾರಿಯಲ್ಲಿ ಸ್ಟೀಲ್ ಆಂಡ್ ಅಲೈ ಎಂಬ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯ ಗುಬ್ಬಲಾಳ ಮುಖ್ಯರಸ್ತೆ ರಾಯಲ್ ಫಾಮ್ಸ್ ಬಡಾವಣೆಯಲ್ಲಿ ಪತ್ನಿ ಪಾರ್ವತಿ, ಎರಡನೇ ಪುತ್ರ ಮಧುಬಾಬು ಅವರೊಂದಿಗೆ ವಾಸವಾಗಿದ್ದರು.
ಮೃತ ಮಾಧವ ಅವರೊಂದಿಗೆ ಅವರ ತಮ್ಮ ಶಿವರಾಮ್ ಪ್ರಸಾದ್ ಹಾಗೂ ಮಾಧವ ಅವರ ಕಿರಿಯ ಮಗ ಹರಿಕೃಷ್ಣ ಆಸ್ತಿಯ ವಿಚಾರದಲ್ಲಿ ಜಗಳವಾಡಿದ್ದರು. ಈ ಹಿನ್ನೆಲೆಯಲ್ಲಿ ಫೆಬ್ರವರಿ 14ರಂದು ಮಧ್ಯಾಹ್ನ 1.30ರ ಸುಮಾರಿಗೆ ಮಾಧವ ಅವರು ಗುಬ್ಬಲಾಳ ಮುಖ್ಯರಸ್ತೆಯ ರಾಯಲ್ ಫಾಮ್ಸ್ ಲೇಔಟ್ ರಸ್ತೆಯಲ್ಲಿ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಅವರ ಕತ್ತನ್ನು ಸೀಳಿ ಕೊಲೆ ಮಾಡಿ ಪರಾರಿಯಾಗಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರಾದ ರೋಹಿಣಿ ಕಟೋಚ್ ಆದೇಶದಂತೆ ಸುಬ್ರಹ್ಮಣ್ಯಪುರ ಉಪ ವಿಭಾಗದ ಸಹಾಯಕ ಆಯುಕ್ತ ತಲಘಟ್ಟಪುರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ರಾಮಪ್ಪ ಗುತ್ತೇರ್ ನೇತೃತ್ವದಲ್ಲಿ ಎರಡು ವಿಶೇಷ ತಂಡಗಳನ್ನು ರಚಿಸಿದ್ದರು.
ಈ ತಂಡ ಆರೋಪಿಗಳ ಮಾಹಿತಿ ಸಂಗ್ರಹಿಸಿ, ಪಾಂಡಿಚೇರಿ, ಆನಂತಪುರ, ಗೋವಾ, ಪೂನಾ, ಮುಂಬೈ, ಬೆಳಗಾವಿ, ಬಳ್ಳಾರಿ ಕಡೆ ಸಂಚರಿಸಿ ಕೊನೆಗೆ ಮೂರನೇ ಆರೋಪಿ ರಿಯಾಜ್ ಅಲಿಯಾಸ್ ಗೋವಾ ರಿಯಾಸ್‌ನನ್ನು ಗೋವಾದಲ್ಲಿ ಪತ್ತೆ ಮಾಡಿ ವಿಚಾರಣೆ ನಡೆಸಿತು.
ವಿಚಾರಣೆಗೆ ವೇಳೆ ರಿಯಾಜ್ ಕೊಲೆಯ ಬಗ್ಗೆ ಮಾಹಿತಿ ನೀಡಿ, ಹರಿಕೃಷ್ಣ ಹಾಗೂ ಮಾಧವರ ಅವರ ತಮ್ಮ ಶಿವರಾಮ್ ಪ್ರಸಾದ್ ಇಬ್ಬರೂ ಕೊಲೆ ಮಾಡಲು 25 ಲಕ್ಷ ರೂಪಾಯಿ ಸುಪಾರಿ ಕೊಟ್ಟಿರುವುದನ್ನು ಬಾಯಿಬಿಟ್ಟಿದ್ದಾನೆ.
ಆರೋಪಿಗಳಾದ ಹರಿಕೃಷ್ಣ ಹಾಗೂ ಶಿವರಾಮ್ ಪ್ರಸಾದ್ ಮಾಧವ ಅವರನ್ನು ಕೊಲೆ ಮಾಡಿಸಲು ಈ ಮೊದಲು ಎರಡು ತಂಡಗಳಿಗೂ ಸುಫಾರಿ ನೀಡಿದ್ದರು. ಅವರು ಕೂಡ ಕೊಲೆ ಮಾಡುವ ಯತ್ನದಲ್ಲಿದ್ದರು. ಆದರೆ ಕೊಲೆ ಮಾಡುವುದು ವಿಳಂಬವಾದುದರಿಂದ ಅಸಮಾಧಾನಗೊಂಡು, ಮೂರನೇ ಸುಫಾರಿಯನ್ನು ರಿಯಾಜ್ ಗೆ ಕೊಟ್ಟಿದ್ದರು. ರಿಯಾಜ್‌ನೊಂದಿಗೆ 25 ಲಕ್ಷ ರೂ.ಮಾತನಾಡಿದ್ದರೂ ಮುಂಗಡವಾಗಿ 7.5 ಲಕ್ಷ ರೂ. ನೀಡಿದ್ದರು.
ಮಾಧವ ಅವರ ಕೊಲೆ ಆರೋಪಿಗಳಾದ ಹರಿಕೃಷ್ಣ ಮತ್ತು ಶಿವರಾಮ್ ಪ್ರಸಾದ್ ವಿರುದ್ಧ ಎಸ್.ಜೆ.ಪಾರ್ಕ್, ವಿವೇಕ್ ನಗರ, ಜೆ.ಸಿ.ನಗರ, ಸುಬ್ರಹ್ಮಣ್ಯನಗರ, ಬಳ್ಳಾರಿ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಹರಿಕೃಷ್ಣ ಮತ್ತು ಶಿವರಾಮ್ ಪ್ರಸಾದ್ ವಿರುದ್ಧ ಕಿಡ್ನಾಪ್, ಹಲ್ಲೆ ಪ್ರಕರಣಗಳು ದಾಖಲಾಗಿವೆ.
ಮಾಧವ ಅವರಿಗೆ ಬಳ್ಳಾರಿಯಲ್ಲಿ ಸುಮಾರು 2 ಸಾವಿರ ಎಕರೆಯಲ್ಲಿ ಬಳ್ಳಾರಿ ಸ್ಟೀಲ್ ಆಂಡ್ ಅಲೈ ಲಿಮಿಟೆಡ್ ಮೈನ್ಸ್ ಕಂಪನಿ ಇದ್ದು, ಸುಮಾರು 100 ಕೋಟಿ ರೂ.ಮೌಲ್ಯದ ಆಸ್ತಿಯನ್ನು ಹೊಂದಿದ್ದರು. ಮಾಧವ ಅವರನ್ನು ಕೊಲೆ ಮಾಡಿದರೆ ಸಂಪೂರ್ಣ ಆಸ್ತಿ ತಮ್ಮ ಕೈ ವಶವಾಗುತ್ತದೆ ಎಂಬ ದುರಾಸೆಯಿಂದ ಸುಪಾರಿ ಕೊಟ್ಟು ಕೊಲೆ ಮಾಡಿಸಿರುವುದು ವಿಚಾರಣೆಯ ವೇಳೆ ಬೆಳಕಿಗೆ ಬಂದಿದೆ.
ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರಾದ ರೋಹಿಣಿ ಕಟೋಚ್ ಸಪಟ್ ಮಾರ್ಗದರ್ಶನದಲ್ಲಿ ಸುಬ್ರಹ್ಮಣ್ಯಪುರ ಉಪ ವಿಭಾಗದ ಸಹಾಯಕ ಆಯುಕ್ತ ಮಂಜುನಾಥ್ ಬಾಬು ಅವರ ನೇತೃತ್ವದಲ್ಲಿ ತಲಘಟ್ಟಪುರ ಪೊಲೀಸ್ ಇನ್ಸ್ ಪೆಕ್ಟರ್ ರಾಮಪ್ಪ ಗುತ್ತೇರ್, ಸಬ್ ಇನ್ಸ್ ಪೆಕ್ಟರ್ ನಾಗೇಶ್, ಕೆ.ಆರ್. ಶ್ರೀನಿವಾಸ್ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.