ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ 41ನೇ ಅದ್ಯಕ್ಷರಾಗಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಇಂದು ವಹಿಸಿಕೊಂಡರು.
ಕೆಪಿಸಿಸಿ ನಿಕಟಪೂರ್ವ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಶಿವಕುಮಾರ್ ಅವರಿಗೆ ಪಕ್ಷ ಬಾವುಟ ನೀಡುವ ಮೂಲಕ ಅಧಿಕಾರಿವನ್ನು ಹಸ್ತಾಂತರಿಸಿದರು. ಶಿವಕುಮಾರ್ ಜತೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷರು ಪ್ರತಿಜ್ಞಾನವಿಧಿ ಸ್ವೀಕರಿಸಿದರು.
ಡಿ.ಕೆ.ಶಿವಕುಮಾರ್ ಮಾತನಾಡಿ, ಬಿಜೆಪಿ ಷಡ್ಯಂತರದಿಂದ ನನ್ನ ರಾಜಕೀಯ ಜೀವನ ಮುಗಿದೋಯಿತು ಎಂದು ನಮ್ಮ ಕಾರ್ಯಕರ್ತರು ಕಣ್ಣೀರಿಡುತ್ತಿದ್ದ ಸಮಯದಲ್ಲಿ ನಾನು ಜೈಲಿನಲ್ಲಿದ್ದಾಗ ನನ್ನು ಭೇಟಿ ಮಾಡಿ ಸೋನಿಯಾ ಮೇಡಂ ಅವರು ನನಗೆ ಅಂದೆ ಈ ಜವಾಬ್ದಾರಿ ವಹಿಸಿಕೊಡು ಬಗ್ಗೆ ಮಾತನಾಡಿದರು. ಮತ್ತು ಧೈರ್ಯತುಂಬಿದ್ದರು. ಅಣತಿಯಂತೆ ಇಂದು ನಾನು ನಿಮ್ಮ ಮುಂದೆ ಅಧ್ಯಕ್ಷನಾಗಿ ನಿಂತಿದ್ದೇನೆ.
ಆದರೆ, ನನ್ನ ಒಬ್ಬನಿಂದ ಪಕ್ಷವನ್ನು ಮುನ್ನಡೆಸಲು ಸಾಧ್ಯವಿಲ್ಲ. ಸಾಮೂಹಿಕ ನಾಯಕತ್ವದಲ್ಲಿ ಪಕ್ಷ ಮೇಲಕ್ಕೆ ಬರಬೇಕು. ಈ ಸಾಮೂಹಿಕ ನಾಯಕತ್ವದಲ್ಲೇ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸೋಣ, ನಾನು ಮೊದಲು ಒಬ್ಬ ಕಾಂಗ್ರೆಸ್ ಕಾರ್ಯಕರ್ತ ನಂತರ ಅಧ್ಯಕ್ಷ ಎಂದು ಹೇಳಿದರು.
ಅನೇಕ ಕಷ್ಟಗಳನ್ನು ನಾನು ಅನುಭವಿಸಿದ್ದೇನೆ. ನನಗೋಸ್ಕರ ಅಲ್ಲ. ಇಂದು ನಾನು ಪಕ್ಷ ವಹಿಸಿದ ಎಲ್ಲಾ ಕೆಲಸಗಳನ್ನು ಮಾಡುತ್ತೇನೆ. ಗಾಂಧಿ ಕುಟುಂಬ ಕೊಟ್ಟಂತಹ ಶಕ್ತಿಯನ್ನು ನಾನು ಇರುವವರೆಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ಸೇವಾದಳವನ್ನು ಅಂದು ಕೊಟ್ಟ ಇಂದಿರಾಗಾಂಧಿಯವರ ಸೇವೆಯನ್ನು ನಾವು ಮರೆಯಲು ಸಾಧ್ಯವಿಲ್ಲ. ಎಲ್ಲಾ ಕಾರ್ಯಕರ್ತರನ್ನು ಇಂದು ಮುನ್ನೆಲೆಗೆ ತರುವ ನಿಟ್ಟಿನಲ್ಲಿ ನಾವು ಇಂದು ಹೆಜ್ಜೆ ಹಾಕಬೇಕಿದೆ. ಹಿಂದೆ ಕಾರ್ಯಕರ್ತರನ್ನು ಯಾವರೀತಿ ನಡೆಸಿಕೊಂಡೆವು ಎಂಬ ಬಗ್ಗೆ ಚರ್ಚೆಗೆ ಹೋಗುವುದಿಲ್ಲ. ಇಂದು ಭೂತ್ ಮಟ್ಟದ ಕಾರ್ಯಕರ್ತರಿಗೆ ಶಕ್ತಿಕೊಡುವ ಕೆಲಸವನ್ನು ಮಾಡೋಣ. ಅದಕ್ಕೆ ಕಾರ್ಯಕ್ರಮವನ್ನು ನಾನು ರೂಪಿಸುತ್ತಿದ್ದೇನೆ ಎಂದು ತಿಳಿಸಿದರು.
ಗುಂಪುಗಾರಿಕೆ, ಜಾತಿ ಬಗ್ಗೆ ನನಗೆ ನಂಬಿಕೆ ಇಲ್ಲ. ಕಾಂಗ್ರೆಸ್ ಜಾತಿ ಕಾಂಗ್ರೆಸ್ ಗುಂಪಿನ ಬಗ್ಗೆ ನನಗೆ ನಂಬಿಕೆ ಇದೆ. ಹೀಗಾಗಿ ನಾವು ಪಕ್ಷದ ಪೂಜೆ ಮಾಡೋಣ, ನನಗೆ ಹಿಂಬಾಲಕರು ನನಗೆ ಬೇಡ, ಯಾರನ್ನು ನಂಬಲು ಆಗುತ್ತಿಲ್ಲ. ನಮ್ಮ ನೆರಳನ್ನೇ ನಾವು ನಂಬಲಾಗದ ಪರಿಸ್ಥಿತಿ ಬಂದಿದೆ ಎಂದು ಹೇಳಿದರು.
ನಂತರ ಮಾತನಾಡಿದ ಪಕ್ಷದ ಪ್ರಧಾನ ಕಾರ್ಯದರ್ಶಿ, ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ರಾಜ್ಯದಲ್ಲಿ ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಪಕ್ಷವನ್ನು ಮುನ್ನಡೆಸಲು ಡಿಕೆಶಿ ಸಮರ್ಥನಾಯಕರಾಗಿದ್ದು ಅವರಿಗೆ ಪಕ್ಷದ ಎಲ್ಲಾ ಹಿರಿಯ, ಕಿರಿಯ ನಾಯಕರು ಮತ್ತು ಕಾರ್ಯಕರ್ತರು ಬೆನ್ನೆಲುಬಾಗಿ ನಿಲ್ಲಬೇಕು ಎಂದು ಸಲಹೆ ನೀಡಿದರು.
ಇನ್ನು ನಿಕಪೂರ್ವ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಕೆಲಗೊಂದಲಗಳ ನಡುವೆ ನಾನು ಅಧ್ಯಕ್ಷನಾಗಿ ಸಮರ್ಥತೆಯಿಂದ ನನಗೆ ವಹಿಸಿದ್ದ ಕೆಲಸವನ್ನು ಮಾಡಿದ್ದೇನೆ ಎಂಬ ತೃಪ್ತಿಯಿದೆ. ಇನ್ನು ಕೆಲವೇಳೆ ನಾವು ಅಂದುಕೊಂಡಷ್ಟರ ಮಟ್ಟಿಗೆ ಗುರಿಸಾಧಿಸಲಾಗಲಿಲ್ಲವ ಎಂಬ ನೋವು ಕೂಡ ಇದೆ ಎಂದ ಅವರು ಇಂದು ಡಿಕೆಶಿ ಅವರು ಅಧಿಕಾರ ಸ್ವೀಕರಿಸಿದ್ದು ಪಕ್ಷವನ್ನು ಸಮರ್ಥವಾಗಿ ಮುನ್ನಡೆಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಸದ ಮಲ್ಲಿಕಾರ್ಜುನ ಖರ್ಗೆ, ಡಾ.ಜಿ.ಪರಮೇಶ್ವರ್ ಸೇರಿದಂತೆ ನೂರಾರು ಹಿರಿಯ ನಾಯಕರು, ಕಾರ್ಯಕರ್ತರು ಇದ್ದರು.