ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಸಹಾಯಕ ತಾಂತ್ರಿಕ ಹುದ್ದೆಗೆ ಈಗಾಗಲೇ ಆಯ್ಕೆಯಾಗಿರುವ ಅಭ್ಯರ್ಥಿಗಳ ನಿಯೋಜನೆಗೆ ಆದೇಶ ಹೊರಡಿಸಲಾಗಿದೆ ಎಂದು ಸಾಮಾಜಿಕ ಜಾಲತಾಣವಾದ ವಾಟ್ಸ್ ಆಪ್‌ನಲ್ಲಿ ಊಹಾಪೋಹಗಳು ಹರಿದಾಡುತ್ತಿದ್ದು,ಇದು ಶುದ್ಧ ಸುಳ್ಳಿನಿಂದ ಕೂಡಿದೆ. ಹಾಗಾಗಿ ಯಾರು ಈ ಕುರಿತು ಕಿವಿಗೊಡಬಾರದು ಎಂದು ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ್ ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದ್ದು, ದೇಶವ್ಯಾಪಿ ಕೊರೊನಾ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ನೇಮಕಾತಿಗೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಸಹಾಯಕ ಸಂಚಾರ ನಿರೀಕ್ಷಕ ಹುದ್ದೆಗಳ ನೇಮಕಾತಿ ಪೂರ್ಣಗೊಂಡಿದ್ದು, ಆಯ್ಕೆಯಾಗಿರುವ ಅಭ್ಯರ್ಥಿಗಳನ್ನು ನಿಗಮದ ವಿವಿಧ ವಿಭಾಗಗಳಲ್ಲಿ ತರಬೇತಿಗಾಗಿ ಈಗಾಗಲೇ ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಸ್ತುತ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಯಾವುದೇ ನೇಮಕಾತಿ ಪ್ರಕ್ರಿಯೆಗಳು ನಡೆಯುತ್ತಿಲ್ಲ. ಇಂತಹ ನಕಲಿ ಆದೇಶಗಳ ಬಗ್ಗೆ ಸಾರ್ವಜನಿಕರು ಎಚ್ಚರದಿಂದಿರಬೇಕು. ನಿಗಮದಲ್ಲಿ ಯಾವುದೇ ಹುದ್ದೆ ಕೊಡಿಸುವುದಾಗಿ ಯಾರಾದರೂ ಆಮಿಷವೊಡ್ಡಿದಲ್ಲಿ ಈ ಬಗ್ಗೆ ಮೊಬೈಲ್ ದೂರವಾಣಿ 7760990051 ಮತ್ತು 7760990095ಕ್ಕೆ ಸಂಪರ್ಕಿಸಿ ಮಾಹಿತಿ ನೀಡಬಹುದು ಎಂದು ಹೇಳಿದ್ದಾರೆ.
ಸಾರಿಗೆ ನಿಗಮದ ನೇಮಕಾತಿಗಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ನಿಗಮದ ವೆಬ್‌ಸೈಟ್ www.ksrtcjobs.com ನಲ್ಲಿ ಪ್ರಕಟಿಸಲಾಗಿದೆ ಎಂದು ಕಳಸದ್ ತಿಳಿಸಿದ್ದಾರೆ.