ಬೆಂಗಳೂರು: ನಾಡಿನ ಮಕ್ಕಳ ಬಹುದಿನಗಳ ನಿರೀಕ್ಷೆಯಾದ ಹಾಗೂ ಕೊರೊನಾ ಕಾಲಘಟ್ಟದ ಸಾಮಾಜಿಕ ಪರಿಸ್ಥಿತಿಯ ಮಧ್ಯೆಯೂ ನಡೆಯುತ್ತಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ ರಾಜ್ಯದೆಲ್ಲೆಡೆ ಯಾವುದೇ ವ್ಯತ್ಯಯವಿಲ್ಲದೇ ಅತ್ಯಂತ ಯಶಸ್ವಿಯಾಗಿ ನಡೆದು ಇತಿಹಾಸವನ್ನೇ ಸೃಷ್ಟಿಸಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
ಗುರುವಾರ ನಡೆದ ಎಸ್ಸೆಸ್ಸೆಲ್ಸಿ ಮೊದಲ ದಿನದ ಪರೀಕ್ಷೆಯ ನಂತರ ಪರೀಕ್ಷೆ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪರೀಕ್ಷೆ ನಡೆಯುತ್ತಿರುವ ವಿಧಾನಗಳು ನಮಗೆ ನೈಜ ಪ್ರಜಾಪ್ರಭುತ್ವದ ಮಹೋತ್ಸವವಾಗಿ ಗೋಚರಿಸಿದೆ ಎಂದರು.
ಈ ಬಾರಿಯ ಪರೀಕ್ಷೆ ಕೇವಲ ಶಿಕ್ಷಣ ಇಲಾಖೆಗೆ ಮಾತ್ರವೇ ಸೀಮಿತವಾಗಿಲ್ಲ. ಪರೀಕ್ಷೆಗೆ ಇಡೀ ರಾಜ್ಯ ಸರ್ಕಾರವೇ ಟೊಂಕಕಟ್ಟಿ ನಿಂತಿದ್ದು, ಸುಲಲಿತವಾಗಿ ಪರೀಕ್ಷೆ ನಡೆಯುತ್ತಿರುವುದರ ಹಿಂದೆ ಇಡೀ ಸರ್ಕಾರದ ಪ್ರಾಮಾಣಿಕ ಪ್ರಯತ್ನ ಮತ್ತು ಆಡಳಿತ ಯಂತ್ರದ ಸಮರ್ಪಣೆ ಇದೆ. ಕೋವಿಡ್ ಪ್ರಸರಣದ ಕಾಲಘಟ್ಟದ ಮಧ್ಯೆ ನಡೆದ ಈ ಪರೀಕ್ಷೆಗೆ ವ್ಯವಸ್ಥೆಯೊಂದಿಗೆ ಸಾರ್ವಜನಿಕರು, ಪೋಷಕರು ಎಲ್ಲರೂ ಒಟ್ಟಾಗಿ ಕೈಜೋಡಿಸಿ ಒಂದು ಸಂಘಟಿತ ಯಶಸ್ಸಿಗೆ ಕಾರಣೀಭೂತರಾಗಿದ್ದಾರೆ ಎಂದು ಹೇಳಿದರು.
ಈ ಪರೀಕ್ಷೆಯ ಪೂರ್ವದಲ್ಲಿ ತೆಗೆದುಕೊಂಡ ಯೋಜನಾಬದ್ಧ ನಿರ್ಧಾರಗಳು ಮತ್ತು ಅವುಗಳನ್ನು ಅನುಷ್ಠಾನಗೊಳಿಸಿದ ವೃತ್ತಿಪರ ವ್ಯವಸ್ಥೆ ಎಷ್ಟೊಂದು ಅಚ್ಚುಕಟ್ಟಿಗೆ ನಾಂದಿಯಾಗಿದೆ ಎಂದು ಹೇಳಿದ ಸುರೇಶ್ ಕುಮಾರ್ ಅದಕ್ಕೆ ಪೂರಕವಾದ ಹಲವಾರು ನಿದರ್ಶನಗಳನ್ನು ನೀಡಿದರು.
ಕೇರಳದ ಗಡಿ ಭಾಗಗಳಲ್ಲಿ ನೆಲೆಸಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಶಾಲೆಗಳಲ್ಲಿ ಕಲಿಯುತ್ತಿರುವ 367 ವಿದ್ಯಾರ್ಥಿಗಳನ್ನು ಇಂದು ದಕ್ಷಿಣ ಕನ್ನಡ ಜಿಲ್ಲಾಡಳಿತ ಕೇರಳ-ಕರ್ನಾಟಕದ ತಾಳಪಾಡಿ ಗಡಿ ಬಳಿ ಸ್ವಾಗತಿಸಿ ರಾಜ್ಯ ಸಾರಿಗೆ ಸಂಸ್ಥೆಯ 92 ಬಸ್ ಗಳಲ್ಲಿ ಅತ್ಯಂತ ಸುರಕ್ಷಿತ ವಾತಾವರಣದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಪರೀಕ್ಷಾ ಕೇಂದ್ರಗಳಲ್ಲಿ ಕರೆತರಲಾಗಿದೆ. ಯಾವುದೇ ವಿದ್ಯಾರ್ಥಿಗೆ ಯಾವುದೇ ತೊಂದರೆಯಾಗಿಲ್ಲ. ಕೇರಳ ರಾಜ್ಯದ ವಿದ್ಯಾರ್ಥಿಗಳು ಪೂರ್ಣಪ್ರಮಾಣದಲ್ಲಿ ಹಾಜರಾಗಿರುವುದು ವಿಶೇಷ.
ಮಂಗಳೂರಿನಲ್ಲಿ ಕಸಬಾ ಬೇಂಗ್ರೆ ಭಾಗದ 27 ಭಾಗದ ವಿದ್ಯಾರ್ಥಿಗಳು ಬಂದು ಮಂಗಳೂರಿನ ಮೂರು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗೆ ಹಾಜರಾಗಿದ್ದಾರೆ. ಇವರನ್ನು ಬೋಟಿನಿಂದ ಇಳಿದ ತಕ್ಷಣವೇ ಅರೋಗ್ಯ ಪರೀಕ್ಷೆ ನಡೆಸಿ ಪರೀಕ್ಷಾ ಕೇಂದ್ರಗಳಿಗೆ ವಾಹನದಲ್ಲಿ ಕರೆತರಲಾಯಿತು ಎಂದು ತಿಳಿಸಿದರು.