ಹಾಸನ: ಜ್ವರ ಬಂದ ಬಳಿಕ ರಜೆಹಾಕಿ ತನ್ನೂರಿಗೆ ಹೋಗಿದ್ದ ಬಿಎಂಟಿಸಿ ಚಾಲಕರೊಬ್ಬರಿಗೆ ಹಾಸನದಲ್ಲಿ ಕೊರೊನಾ ಸೋಂಕು ದೃಢವಾಗಿದೆ. ಇದರಿಂದ ಜಿಲ್ಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಚಾಲಕ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜೂನ್ 14ರಂದು ರಜೆ ಹಾಕಿ ಅರಸೀಕೆರೆ ತಾಲೂಕಿನ ಸ್ವಗ್ರಾಮಕ್ಕೆ ಹೋಗಿದ್ದರು.
ಆ ಗ್ರಾಮದಲ್ಲೇ ಉಳಿದು ಕೊಂಡು ಮೂರು ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದರು. ಆದರೆ ಅವರ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡು ಬರದ ಹಿನ್ನೆಲೆಯಲ್ಲಿ ಅವರನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೀಗ ಆ ಚಾಲಕನಿಗೆ ಸೋಂಕು ತಗುಲಿರೋದು ದೃಢಪಟ್ಟಿದೆ.
ಸೋಂಕು ಇರುವುದು ಖಚಿತವಾಗುತ್ತಿದ್ದಂತೆ ಚಾಲಕ ವಾಸವಾಗಿದ್ದ ಗ್ರಾಮವನ್ನೇ ಸೀಲ್‍ಡೌನ್ ಮಾಡಲಾಗಿದೆ. ಇವರು ಕರ್ತವ್ಯ ನಿರ್ವಹಿಸಿದ ಸ್ಥಳ, ಅವರು ಯಾರ ಜತೆ ಪ್ರಾಥಮಿಕ ಸಂಪರ್ಕದಲ್ಲಿ ಇದ್ದರು ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ತಿಳಿಸಿದ್ದಾರೆ.