ಬೆಂಗಳೂರು: ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ನಡೆಸುತ್ತಿರುವ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಬಿಎಂಟಿಸಿ ನೌಕರರು ದೇವರ ಮೊರೆ ಹೋಗಿದ್ದಾರೆ.
ಯಶವಂತಪುರ ಸರ್ಕಲ್ ಬಳಿಯ ಗಾಯಿತ್ರಿ ದೇವಸ್ಥಾನದಲ್ಲಿ ಸಾರಿಗೆ ನೌಕರರು ಸೇರಿದ್ದಾರೆ ಅಲ್ಲದೆ ದೇವಿಯ ಮುಂದೆ ಕುಳಿತು ತಮ್ಮ ಬೇಡಿಕೆ ಈಡೇರಿಸುವಂತೆ ಬೇಡಿಕೊಂಡಿದ್ದಾರೆ.
ಶುಕ್ರವಾರ ಆರಂಭವಾಗಿರುವ ಕೆಎಸ್ಸಾರ್ಟಿಸಿ, ಬಿಎಂಟಿಸಿ, ವಾಯುವ್ಯ ಮತ್ತು ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ಸಿಬ್ಬಂದಿ ಪ್ರತಿಭಟನೆ ಇಂದು ಕೂಡ ಮುಂದುವರಿದಿದೆ. ಹೀಗಾಗಿ ನಾಲ್ಕು ಸಾರಿಗೆ ಸಂಸ್ಥೆಗಳ ಬಸ್‌ಗಳು ಇಂದು ರೋಡಿಗೆ ಇಳಿದಿಲ್ಲ.
ಕೆಎಸ್ಸಾರ್ಟಿಸಿ ಸಿಬ್ಬಂದಿಯನ್ನು ಪ್ರತಿನಿಧಿಸುವ ಸಿಐಟಿಯು ಅಧ್ಯಕ್ಷ ಅನಂತ ಸುಬ್ಬರಾವ್ ಜೊತೆಗೆ ನಿನ್ನೆಯಷ್ಟೇ ಸಾರಿಗೆ ಸಚಿವ ಲಕ್ಷ್ಮಣ ಸವದಿ ಮಾತುಕತೆ ನಡೆಸಿದ್ದಾರೆ. ಆದರೆ ಈ ಪ್ರತಿಭಟನೆಯಲ್ಲಿ ಸಿಐಟಿಯು ಪಾಲ್ಗೊಂಡಿಲ್ಲ. ಅಷ್ಟೇ ಅಲ್ಲದೆ ಈ ಪ್ರತಿಭಟನೆಯ ಅಗತ್ಯ ವಿಲ್ಲ ಎಂದು ಸಿಐಟಿಯು ಹೇಳಿದೆ. ಮೊನ್ನೆ ಬೆಂಗಳೂರಿನಲ್ಲಿ ನಡೆದ ಹೋರಾಟದಲ್ಲಿ ಸಾರಿಗೆ ಸಂಸ್ಥೆಗಳ ಸಿಬ್ಬಂದಿ ಪಾಲ್ಗೊಂಡಿದ್ದರು. ಈ ವೇಳೆ ಸರ್ಕಾರ ಪೊಲೀಸರನ್ನು ಬಳಸಿಕೊಂಡು ವಶಕ್ಕೆ ಪಡೆದಿತ್ತು ಇದು ಸಾರಿಗೆ ಸಿಬ್ಬಂದಿ ಕೆಂಗಣ್ಣಿಗೆ ಕಾರಣವಾಗಿದೆ.