ಬೆಂಗಳೂರು: ನಾನು ಐದು ವರ್ಷಗಳ ಹಿಂದೆ ಕಳೆದುಕೊಂಡಿರುವ ಅರಶಿನ-ಕುಂಕುಮವನ್ನು ಮತದ ಸ್ವರೂಪದಲ್ಲಿ ಭಿಕ್ಷೆಯಾಗಿ ನೀಡಿ. ನನ್ನ ಉಳಿದ ಬದುಕನ್ನು ನಿಮ್ಮ ಸೇವೆಗೆ ಮುಡಿಪಾಗಿಡುತ್ತೇನೆ ಎಂದು ಆರ್.ಆರ್.ನಗರ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಮನವಿ ಮಾಡಿದರು.
ಕೆಪಿಸಿಸಿ ಕಚೇರಿಯ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಂದನೆ, ಅಪನಿಂದನೆಗಳಿಂದ ನೊಂದಿರುವ ನಿಮ್ಮ ಮನೆಮಗಳನ್ನು 3ರಂದು ನೀವೆಲ್ಲರೂ ಹುಡಿ ತುಂಬಿ ಹಾರೈಸಲಿದ್ದೀರಿ ಎಂಬ ನಂಬಿಕೆ ನನಗಿದೆ. ನನ್ನ ಜೀವನವನ್ನು ನಿಮ್ಮಸೇವೆಗೆ ಮೀಸಲಿಟ್ಟು ತೀರಿಸುವೆ ಎಂದರು.
ಕಳೆದ 20 ದಿನಗಳಿಂದ ನನ್ನ ಜೀವನದಲ್ಲಿ ಆಗಿರುವ ಬದಲಾವಣೆಗಳು ಎಲ್ಲರಿಗೂ ಗೊತ್ತಿದೆ. ನನ್ನ ಹೆಸರು ಚುನಾವಣೆ ಕಣದ ಮುನ್ನೆಲೆಗೆ ಬಂದ ಕ್ಷಣದಿಂದಲೂ ನಿರಂತರ ವಾಗ್ದಾಳಿಗಳು, ಗದಾಪ್ರಹಾರ ನಡೆಯುತ್ತಲೇ ಇದೆ. ನನ್ನ ಗಂಡನ ಹೆಸರು ಬಳಸಬಾರದು ಅಂತೀರಿ. ನನ್ನ ಮೇಲೆ ಸುಳ್ಳು ಎಫ್ ಐಆರ್ ಹಾಕ್ತೀರಿ ಎಂದರು.
ಪ್ರಚಾರಕ್ಕೆ ಅಡ್ಡಿಪಡಿಸಿದ್ದೀರಿ. ಅಲ್ಲದೆ ನಾನು ಪ್ರಚಾರಕ್ಕೆ ಹೋದ ಕೆಲವು ಮನೆಗಳಲ್ಲಿ, ನೀವು ನನ್ನ ಬಗ್ಗೆ ಆಡಿರುವ ಮಾತುಗಳು, ಬಳಸಿರುವ ಭಾಷೆ ಯಾವುದೇ ಹೆಣ್ಣು ಕೇಳುವಂಥದ್ದಲ್ಲ. ಅಂಥ ಚುಚ್ಚು ಮಾತುಗಳನ್ನು ಆಡಿದ್ದೀರಿ. ನಾನು ನಿಮಗೇನು ಅನ್ಯಾಯ ಮಾಡಿದ್ದೇ ಮುನಿರತ್ನ ಅಣ್ಣನವರೇ..? ಗಂಡ ಸತ್ತ ಮುಂಡೆಗೆ ಯಾಕೆ ರಾಜಕೀಯ ಅಂತಾ ಕೇಳಿದ್ದೀರಿ. ಗಂಡನನ್ನು ತಿಂದವಳಿಗೆ ಯಾಕೆ ರಾಜಕೀಯ ಅಂತಾ ಹೇಳಿದ್ದೀರಿ. ಇದು ನಿಮಗೆ ಶೋಭೆ ತರುತ್ತದೆಯೇ? ಎಂದು ಪ್ರಶ್ನಿಸಿದರು.