ಬೆಂಗಳೂರು: ಖಾಸಗಿ ಶಾಲೆಗಳ ವ್ಯಾಮೋಹ ಬಿಡಿ ಎಂದು ಪಾಲಕರಿಗೆ ಸರ್ಕಾರ ಎಷ್ಟು ಬಾರಿ ಮನವಿ ಮಾಡಿಕೊಂಡರು ಕ್ಯಾರೆ ಎನ್ನುತ್ತಿರಲಿಲ್ಲ. ಆದರೆ ಈಗ ಕಾಲ ಬದಲಾಗಿದ್ದು, ಇಂದು ಬಹುತೇಕ ಖಾಸಗಿ ಶಾಲೆಗಳಲ್ಲಿ ಕಲಿಯುತ್ತಿದ್ದ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪಡೆಯುತ್ತಿದ್ದಾರೆ.
ಹೌದು! ಕೊರೊನಾ ವಿಶ್ವಮಾರಿ ಬಂದ ದಿನದಿಂದ ಪಾಲಕರಿಗೆ ಖಾಸಗಿ ಶಾಲೆಗಳ ಧನದಾಹ ಹೆಚ್ಚಿದ್ದರಿಂದ ಬೇಸತ್ತ ಪಾಲಕರು ಸಾವಿರ ಸಾವಿರ ರೂಪಾಯಿಗಳನ್ನು ಪಾವತಿಮಾಡಲು ಶಕ್ತರಾಗಿಲ್ಲ. ಅಲ್ಲದೇ ಸರ್ಕಾರಿ ಶಾಲೆಗಳಲ್ಲಿ ಕಲಿಯಲು ಯಾವುದೇ ಶುಲ್ಕ ಕಟ್ಟಬೇಕಿಲ್ಲ ಹೀಗಾಗಿ ಖಾಸಗಿ ಶಾಲೆಗಳಿಂದ ಮಕ್ಕಳನ್ನು ಬಿಡಿಸಿ ಸರ್ಕಾರಿ ಶಾಲೆಗಳಲ್ಲಿ ದಾಖಲಿಸುತ್ತಿದ್ದಾರೆ.
ಖಾಸಗಿ ಶಾಲೆಗಳು ಆನ್‌ಲೈನ್ ಶಿಕ್ಷಣ ಕೊಡುತ್ತೇವೆ ಫೀಸ್‌ಕಟ್ಟಿ ಜತೆಗೆ ಮಕ್ಕಳಿಗೆ ಮೊಬೈಲ್ ಫೋನ್ ಕೊಡಿಸಿ ಎಂದು ದುಂಬಾಲು ಬಿದ್ದಿದ್ದರಿಂದ ಬೇಸತ್ತ ಪಾಲಕರು ತಮ್ಮ ಮಕ್ಕಳನ್ನು ಈಗ ಸರ್ಕಾರಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಅಲ್ಲದೆ ಸರ್ಕಾರಿ ಶಾಲೆಗಳಲ್ಲೂ ಉತ್ತಮ ಶಿಕ್ಷಣ ಕೊಡುತ್ತಿದ್ದಾರೆ ಎಂದು ಪಾಲಕರಿಗೆ ಅರಿವಾಗಿದೆ. ಹೀಗಾಗಿ ಬಹುತೇಕ ಪಾಲಕರು ಸರ್ಕಾರಿ ಶಾಲೆಗಳತ್ತ ಮುಖಮಾಡಿದ್ದಾರೆ.
ಇನ್ನು ಕೊರೊನಾ ಸೋಂಕಿನಿಂದ ಉಂಟಾದ ಆರ್ಥಿಕ ಪರಿಸ್ಥಿತಿಯಲ್ಲಿ ಜೀವನ ನಡೆಸುವುದೇ ಕಷ್ಟವಾಗಿದೆ. ಈ ನಡುವೆ ಸಾವಿರಾರು ರೂಪಾಯಿಯನ್ನು ಶಾಲೆಗಳಿಗೆ ಕಟ್ಟಿ ಮಕ್ಕಳನ್ನು ಓದಿಸುವುದು ಅಂದರೆ ಅದು ಪ್ರಸ್ತುತ ದಿನಗಳಲ್ಲಿ ಕಷ್ಟಸಾಧ್ಯ ಹಾಗಾಗಿ ನಾವು ಮಕ್ಕಳನ್ನು ಖಾಸಗಿ ಶಾಲೆ ಬಿಡಿಸಿ ಸರ್ಕಾರಿ ಶಾಲೆಗೆ ದಾಖಲು ಮಾಡಿದ್ದೇವೆ ಎಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಪಾಲಕರು ತಮ್ಮ ನಿಲುವನ್ನು ಹಂಚಿಕೊಳ್ಳುತ್ತಿದ್ದಾರೆ.
ಮಕ್ಕಳ ಭವಿಷ್ಯ ಬಹಳ ಮುಖ್ಯ ಆದರೆ ಖಾಸಗಿ ಶಾಲೆಗಳು ತಮ್ಮ ಧನದಾಹದಿಂದ ಇಂದು ನಮ್ಮನ್ನು ಸುಲಿಗೆ ಮಾಡಲು ಒಂದು ರೀತಿ ಮಾನಸಿಕ ಕಿರುಕುಳ ನೀಡುತ್ತಿದ್ದವು ಇದರಿಂದ ಬೇಸತ್ತು ನಮ್ಮ ಮಗುವನ್ನು ಸರ್ಕಾರಿ ಶಾಲೆಗೆ ಸೇರಿಸಿದ್ದೇನೆ ಎಂದು ಮೈಸೂರು ಜಿಲ್ಲೆಯ ಪಾಲಕರೊಬ್ಬರು ಹೇಳಿದ್ದಾರೆ.
ಇದಿಷ್ಟೇ ಅಲ್ಲದೇ ಖಾಸಗಿ ಶಾಲೆಗಳ ಸುಲಿಗೆಗೆ ಸರ್ಕಾರವೂ ಕಡಿವಾಣ ಹಾಕಲು ಸಾಧ್ಯವಾಗಿರಲಿಲ್ಲ. ಆದರೆ ಇಂದು ಪಾಲಕರು ತಮ್ಮ ಮನಸ್ಸನ್ನು ಬದಲಾಯಿಸಿದ್ದರಿಂದ ಮುಚ್ಚುತ್ತಿದ್ದ ಸರ್ಕಾರಿ ಶಾಲೆಗಳು ಇಂದು ಮತ್ತೆ ಓಪನ್ ಆಗುವತ್ತ ಸಾಗುತ್ತಿವೆ. ಇಂದು ರಾಜ್ಯದ ಮಟ್ಟಿಗೆ ಉತ್ತಮ ಬೆಳವಣಿಗೆಯೇ ಎಂದು ಹೇಳಬಹುದಾಗಿದೆ.
Kannada shaale ulisi kannada belesi