ವಿಜಯಪಥ ಸಮಗ್ರ ಸುದ್ದಿ
ನ್ಯೂಡೆಲ್ಲಿ: ರಾಷ್ಟ್ರ ರಾಜಧಾನಿ ದೆಹಲಿಯ ಇಸ್ರೇಲ್ ರಾಯಭಾರಿ ಕಚೇರಿಯ ಬಳಿ ಶುಕ್ರವಾರ ಸಂಜೆ ಬಾಂಬ್ ಸ್ಫೋಟ ಸಂಭವಿಸಿದ ಹಿನ್ನೆಲೆಯಲ್ಲಿ ಎಲ್ಲ ವಿಮಾನ ನಿಲ್ದಾಣಗಳು, ಪ್ರಮುಖ ಕಟ್ಟಡಗಳು, ಸರ್ಕಾರಿ ಕಚೇರಿಗಳಲ್ಲಿ ಹೆಚ್ಚಿನ ಭದ್ರತೆ ವಹಿಸಲಾಗಿದೆ ಎಂದು ಸಿಐಎಸ್ಎಫ್ (ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್) ತಿಳಿಸಿದೆ.
ಕಡಿಮೆ ತೀವ್ರತೆಯ ಬಾಂಬ್ ಸ್ಫೋಟ ಸಂಭವಿಸಿದ್ದರಿಂದ ಮೂರು ಕಾರುಗಳ ಗಾಜುಗಳು ಚೂರಾಗಿದ್ದು, ಯಾರಿಗೂ ಗಾಯಗಳಾಗಿಲ್ಲ. ಆದರೆ, ಹೈ ಸೆಕ್ಯುರಿಟಿ ಇರುವ ಪ್ರದೇಶದ ಬಳಿಯೇ ಈ ಸ್ಫೋಟ ಉಂಟಾಗಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.
ಬಾಂಬ್ ಸ್ಫೋಟ ಸಂಭವಿಸಿದ್ದರಿಂದ ಮುಂಬೈನ ಕಾನ್ಸುಲೇಟ್ ಜನರಲ್ ಆಫ್ ಇಸ್ರೇಲ್ ಕಚೇರಿಗೆ ಸೆಕ್ಯುರಿಟಿ ಹೆಚ್ಚಿಸಲಾಗಿದೆ.
ಇಸ್ರೇಲ್ ರಾಯಭಾರಿ ಕಚೇರಿಯಿಂದ ಕೇವಲ 2 ಕಿ.ಮೀ ದೂರದಲ್ಲಿ ಬೀಟಿಂಗ್ ರಿಟ್ರೀಟ್ ಕಾರ್ಯಕ್ರಮ ನಡೆಯುತ್ತಿತ್ತು. ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಗವಹಿಸಿದ್ದರು. ವಿವಿಐಪಿಗಳಿದ್ದ ಪ್ರದೇಶದಲ್ಲಿ ಹೈ ಸೆಕ್ಯುರಿಟಿ ನಡುವೆಯೂ ಬಾಂಬ್ ಸ್ಫೋಟ ಸಂಭವಿಸಿರುವುದರಿಂದ ಹೈ ಅಲರ್ಟ್ ಘೋಷಿಸಲಾಗಿದೆ.
ಇಸ್ರೇಲ್ ರಾಜತಾಂತ್ರಿಕ ಕಚೇರಿಗೆ ಹೆಚ್ಚಿನ ಭದ್ರತೆ ಒದಗಿಸುವಂತೆ ಭಾರತ ಸರ್ಕಾರಕ್ಕೆ ಇಸ್ರೇಲ್ ಮನವಿ ಮಾಡಿದೆ. ಇದಕ್ಕೂ ಮುನ್ನವೇ ಇಸ್ರೇಲ್ ರಾಯಭಾರಿ ಕಚೇರಿಯ ಎಲ್ಲ ಸಿಬ್ಬಂದಿ ಮತ್ತು ಅಧಿಕಾರಿಗಳು ಸುರಕ್ಷಿತರಾಗಿದ್ದಾರೆ ಎಂದು ಇಸ್ರೇಲ್ ವಿದೇಶಾಂಗ ಇಲಾಖೆ ತಿಳಿಸಿದೆ.
ದೆಹಲಿಯಲ್ಲಿ ನಡೆದ ಸ್ಫೋಟದ ಹಿನ್ನೆಲೆಯಲ್ಲಿಅಯೋಧ್ಯೆ ಸೇರಿದಂತೆ ಉತ್ತರ ಪ್ರದೇಶದ ಹಲವೆಡೆ ಬಿಗಿ ಭದ್ರತೆ ನೀಡಲು ನಿರ್ಧರಿಸಲಾಗಿದೆ. ದೇಶದ ಪ್ರಮುಖ ನಗರಗಳಲ್ಲಿ ಮತ್ತು ಸರ್ಕಾರಿ ಕಚೇರಿಗಳಿಗೆ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಉತ್ತರ ಭಾರತದ ಪ್ರಸಿದ್ಧ ಆಚರಣೆ ಮಹಾಕುಂಭ ಮೇಳಕ್ಕೂ ಭದ್ರತೆಯನ್ನು ಹೆಚ್ಚಿಸಲು ತೀರ್ಮಾನಿಸಲಾಗಿದೆ. ಹರಿದ್ವಾರದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಜಿಂದಾಲ್ ಹೌಸ್ ಬಳಿ ಸ್ಫೋಟ
ದೆಹಲಿಯಲ್ಲಿ ಶುಕ್ರವಾರ ಸಂಜೆ 5 ಗಂಟೆ ಸುಮಾರಿಗೆ ಡಾ. ಎಪಿಜೆ ಅಬ್ದುಲ್ ಕಲಾಂ ರಸ್ತೆಯ ಜಿಂದಾಲ್ ಹೌಸ್ ಬಳಿ ಕಡಿಮೆ ತೀವ್ರತೆಯ ಸ್ಫೋಟ ಸಂಭವಿಸಿದೆ. ಈ ವಿಷಯ ತಿಳಿಯುತ್ತಿದ್ದಂತೆ ದೆಹಲಿ ವಿಶೇಷ ತನಿಖಾ ತಂಡದ ಪೊಲೀಸರು ರಾಷ್ಟ್ರೀಯ ತನಿಖಾ ತಂಡದ ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿ ಪರಿಶೀಲನೆ ನಡೆಸಿದರು.