ವಿಜಯಪಥ ಸಮಗ್ರ ಸುದ್ದಿ
ತುಮಕೂರು: ಮದುವೆಗೆ ಜನರನ್ನು ಹೊತ್ತೊಯ್ಯುತ್ತಿದ್ದ ಬಸ್ ಕಂದಕಕ್ಕೆ ಉರುಳಿಸಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, 30 ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಶಿರಾದ ಮಾಳಗಟ್ಟಿ ಬಳಿ ನಿನ್ನೆ ರಾತ್ರಿ ಸಂಭವಿಸಿದೆ.
ಭೀಕರ ರಸ್ತೆ ಅಪಘಾತದಲ್ಲಿ ಗಾಯಗೊಂಡವರನ್ನು ಶಿರಾದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದೆ. ಕೊರಟಗೆರೆ ತಾಲೂಕಿನ ಬೆಟ್ಟಶಮ್ಮನಹಳ್ಳಿಯಲ್ಲಿ ವಿವಾಹ ಮುಗಿಸಿದ ಸಂಬಂಧಿಕರು ಬಂಗಾರಹಟ್ಟಿಯಲ್ಲಿ ನಡೆಯುವ ರಿಸೆಪ್ಷನ್‌ಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. 40 ರಿಂದ 50 ಜನರಿದ್ದ ಬಸ್, ಮೇಕೆರಹಳ್ಳಿ ಕ್ರಾಸ್ ಬಳಿಯ ಹಳ್ಳಕ್ಕೆ ಉರುಳಿದೆ. ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಉಳಿದವರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.
ಚಾಲಕ ನಿಯಂತ್ರಣ ಳೆದುಕೊಂಡ ಬಸ್ಸಿನ ಈ ಅವಘಡದಿಂದ ಮದುವೆಗೆ ಹೋಗುತ್ತಿದ್ದವರು ಸ್ಮಶಾನ ಸೇರಿದ್ದಾರೆ. 20 ಕ್ಕೂ ಹೆಚ್ಚು ಜನರಿಗೆ ಕೈ ಮತ್ತು ಕಾಲುಗಳಿಗೆ ಗಾಯಗಳಾಗಿದ್ದು, ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಶವಗಳನ್ನು ಶಿರಾ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಗಾಯಾಳುಗಳಿಗೆ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕಿಟ್ಟಪ್ಪ ಮತ್ತು ಭಾಗ್ಯಮ್ಮ ಎಂದು ಗುರುತಿಸಲಾಗಿದೆ. ಇನ್ನೊಬ್ಬರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಈ ದುರಂತಕ್ಕೆ ರಸ್ತೆ ಸರಿ ಇಲ್ಲದಿರುವುದೇ ಕಾರಣ. ಮೇಕೆರಹಳ್ಳಿ ಕ್ರಾಸ್ ಬಳಿ ನಾಲ್ಕೂವರೆ ವರ್ಷಗಳಿಂದ ರಸ್ತೆ ದುರಸ್ತಿ ಮಾಡದೆ ಇಂಥ ಅಪಘಾತಗಳು ನಡೆಯುತ್ತಲೇ ಇವೆ ಎಂದು ಸ್ಥಳೀಯರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.