ವಿಜಯಪಥ ಸಮಗ್ರ ಸುದ್ದಿ
ನ್ಯೂಡೆಲ್ಲಿ: ಸಾಲದಲ್ಲಿ ಮುಳುಗಿರುವ ಸಾರ್ವಜನಿಕ ಸ್ವಾಮ್ಯದ ಏರ್ ಇಂಡಿಯಾದ ಆರ್ಥಿಕ ಪುನಶ್ಚೇತನಕ್ಕಾಗಿ ವಿಶೇಷ ಉದ್ದೇಶ ವಾಹಕವೊಂದನ್ನು ಸ್ಥಾಪಿಸಲಾಗಿದ್ದು, 2021-22ನೇ ಸಾಲಿನ ಬಜೆಟ್ ನಲ್ಲಿ 2,268 ಕೋಟಿ ರೂಪಾಯಿ ಹಂಚಿಕೆ ಮಾಡಲಾಗಿದೆ ಎಂದು ಬಜೆಟ್ ಭಾಷಣದ ವೇಳೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಏರ್ ಇಂಡಿಯಾ ಸಂಸ್ಥೆಯಲ್ಲಿ ಪ್ರಸ್ತುತ ಬಂಡವಾಳ ಹಿಂತೆಗೆತ ಪ್ರಕ್ರಿಯೆ ನಡೆಯುತ್ತಿದೆ. ಅನೇಕ ಬಿಡ್ ದಾರರು ಕಳೆದ ತಿಂಗಳು ಆಸಕ್ತಿ ತೋರಿದ್ದು, ಮುಂದಿನ ವಾರ ಅರ್ಹ ಬಿಡ್ ದಾರರ ಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಹೀಗಾಗಿ ಸಾಲದ ಸುಳಿಯಲ್ಲಿ ಸಿಲುಕಿರುವ ರಾಷ್ಟ್ರೀಯ ಸಂಸ್ಥೆಯ ಆರ್ಥಿಕ ಪುನಶ್ಚೇತನ ಭಾಗವಾಗಿ ವಿಶೇಷ ಉದ್ದೇಶದ ವಾಹಕ ಸ್ಥಾಪನೆಗೆ 2,268 ಕೋಟಿ ರೂ. ಹಂಚಿಕೆ ಮಾಡಿರುವುದಾಗಿ ಹೇಳಿದ್ದಾರೆ.
ನಾಗರಿಕ ವಿಮಾನಯಾನ ಸಚಿವಾಲಯದಡಿಯಲ್ಲಿ ಕಾರ್ಯನಿರ್ವಹಿಸುವ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ದೇಶದಲ್ಲಿ ಸುಮಾರು 100 ವಿಮಾನ ನಿಲ್ದಾಣಗಳನ್ನು ಹೊಂದಿದೆ. ಏರ್ ಇಂಡಿಯಾದಲ್ಲಿ 2021-22ರಲ್ಲಿ ಬಂಡವಾಳ ಹಿಂತೆಗೆತ ಪೂರ್ಣಗೊಳ್ಳಲಿದೆ ಹಾಗೂ ಪವನ್ ಹನ್ಸ್ ನಲ್ಲಿ ಹೂಡಿಕೆ ಹಿಂತೆಗೆತ 2021-22ರಲ್ಲಿ ಮುಗಿಯಲಿದೆ ಎಂದು ತಿಳಿಸಿದರು.
2021-22ರ ಕೇಂದ್ರ ಬಜೆಟ್‌ನಲ್ಲಿ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ 3,224 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ, ಇದು ಪ್ರಸಕ್ತ ಹಣಕಾಸು ವರ್ಷದಲ್ಲಿ ನಿಗದಿಪಡಿಸಿದ 4,131 ಕೋಟಿ ರೂ.ಗಳಲ್ಲಿ ಶೇ. 22 ಕ್ಕಿಂತ ಕಡಿಮೆಯಾಗಿದೆ.
ಹೊಸ ಮೂಲಸೌಕರ್ಯಗಳನ್ನು ಅಭಿವೃದ್ಧಿಗೆ ಹಣ ಸಂಗ್ರಹಿಸಲು ಸರ್ಕಾರವು ಶ್ರೇಣಿ -2 ಮತ್ತು ಶ್ರೇಣಿ -3 ನಗರಗಳಲ್ಲಿನ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಚಾಲಿತ ವಿಮಾನ ನಿಲ್ದಾಣಗಳ ಆಸ್ತಿಯನ್ನು ಸರ್ಕಾರ ವಿತ್ತೀಯಗೊಳಿಸಲಿದೆ.
ಕಳೆದ ವರ್ಷ 2020-21ನೇ ಸಾಲಿಗಾಗಿ ವಿಮಾನಯಾನ ಸಚಿವಾಲಯಕ್ಕೆ 3,797 ಕೋಟಿ ರೂ. ಹಂಚಿಕೆ ಮಾಡಲಾಗಿತ್ತು. ಆದರೆ, ಪರಿಷ್ಕೃತ ಅಂದಾಜಿನಂತೆ 4,131 ಕೋಟಿ ರೂ.ಗೆ ಅದನ್ನು ಹೆಚ್ಚಿಸಲಾಗಿದೆ. 2021-22ರ ಪ್ರಾದೇಶಿಕ ಸಂಪರ್ಕ ಯೋಜನೆ ಉಡಾನ್‌ಗೆ ಪ್ರಸಕ್ತ ಹಣಕಾಸು ವರ್ಷಕ್ಕಿಂತ ಶೇ. 28 ರಷ್ಟು ಕಡಿಮೆ ಅನುದಾನ ನೀಡಲಾಗಿದೆ ಎಂದರು.
ಉಡಾನ್ ಯೋಜನೆಯಡಿ, ಕೇಂದ್ರ, ರಾಜ್ಯ ಸರ್ಕಾರಗಳು ಮತ್ತು ವಿಮಾನ ನಿಲ್ದಾಣ ಆಪರೇಟರ್‌ಗಳು ಆಯ್ದು ಏರ್ ಲೈನ್ಸ್ ಗಳಿಂದ ಸೇವೆ ಇಲ್ಲದ- ಸೇವೆ ಇರುವ ವಿಮಾನ ನಿಲ್ದಾಣಗಳಿಂದ ಕೈಗೆಟುಕುವ ದರದಲ್ಲಿ ಕಾರ್ಯಾಚರಣೆಯನ್ನು ಉತ್ತೇಜಿಸುತ್ತವೆ ಎಂದು ಭಾಷಣದಲ್ಲಿ ಹೇಳಿದರು.