ಲಖನೌ: ದೇಶಾದ್ಯಂತ ವ್ಯಾಪಕ ಆಕ್ರೋಶ ಮತ್ತು ಪ್ರತಿಭಟನೆಗೆ ಕಾರಣವಾಗಿರುವ ಹತ್ರಾಸ್ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅ.10ರಂದು ಕೇಂದ್ರ ತನಿಖಾ ದಳ (ಸಿಬಿಐ) ಅಧಿಕೃತವಾಗಿ ತನಿಖಾ ಜವಾಬ್ದಾರಿಯನ್ನು ವಹಿಸಿಕೊಂಡಿದೆ.
ಈ ಹಿಂದೆ ಹತ್ರಾಸ್ ಪ್ರಕರಣದ ಬಗ್ಗೆ ಕೇಂದ್ರೀಯ ತನಿಖಾ ದಳ-ಸಿಬಿಐನಿಂದ ತನಿಖೆ ನಡೆಸಬೇಕೆಂದು ಉತ್ತರಪ್ರದೇಶ ಸರ್ಕಾರ ಸುಪ್ರೀಂಕೋರ್ಟ್‍ಗೆ ಮನವಿ ಮಾಡಿತ್ತು. ಈ ಪ್ರಕರಣದಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ನಕಲಿ ಮತ್ತು ಸಂಗತಿಗಳನ್ನು ಸೃಷ್ಟಿಸಲು ಯಾವುದೇ ಆಸ್ಪದ ನೀಡುವುದಿಲ್ಲ. ಈ ಘಟನೆ ಬಗ್ಗೆ ಸತ್ಯಾಂಶ ಹೊರಬರಬೇಕು. ಹೀಗಾಗಿ ಕೇಂದ್ರದ ಸ್ವತಂತ್ರ ತನಿಖಾ ಸಂಸ್ಥೆಯಿಂದಲೇ ಈ ಪ್ರಕರಣದ ತನಿಖೆ ನಡೆಸುವುದು ಸೂಕ್ತ ಎಂದು ಸರ್ಕಾರ ಅಫಿಡೆವಿಟ್‍ನಲ್ಲಿ ತಿಳಿಸಿತ್ತು. ಈ ನಡುವೆ ಸ್ವತಃ ಸಿಬಿಐ ಅಧಿಕಾರಿಗಳು ಹತ್ರಾಸ್ ಪ್ರಕರಣವನ್ನು ಅಧಿಕೃತವಾಗಿ ತನಿಖೆಗೆ ಸ್ವೀಕರಿಸಿದ್ದಾರೆ.
ಕಳೆದ ಸಪ್ಟೆಂಬರ್.14ರಂದು ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಹುಲ್ಲು ಕೂಯ್ಯುತ್ತಿದ್ದ ಯುವತಿಯನ್ನು ನಾಲ್ವರು ದುಷ್ಕರ್ಮಿಗಳು ಅಪಹರಿಸಿ ಅತ್ಯಾಚಾರ ನಡೆಸಿದ್ದರು. ಇಷ್ಟಕ್ಕೆ ಸುಮ್ಮನಾಗದೇ ಯುವತಿ ಕತ್ತು ಹಿಸುಕಿ, ನಾಲಗೆ ಕತ್ತರಿಸುವ ಮೂಲಕ ಕ್ರೌರ್ಯ ಮೆರೆದಿದ್ದರು.
ಎರಡು ವಾರ ಸಾವು ಬದುಕಿನ ನಡುವೆ ಹೋರಾಟ ನಡೆಸಿ ಸಪ್ಟೆಂಬರ್.29ರಂದು ದೆಹಲಿಯ ಸಫ್‌ದರ್ ಜಂಗ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಳು. ಸಪ್ಟೆಂಬರ್ 30ರ ಮಧ್ಯರಾತ್ರಿ 3.30ರ ಸಮಯದಲ್ಲಿ ಪೊಲೀಸರೇ ಯುವತಿಯ ಅಂತ್ಯ ಕ್ರಿಯೆ ನೆರವೇರಿಸಿದ್ದರು. ಇದು ಸಾರ್ವಜನಿಕರು ಮತ್ತು ವಿಪಕ್ಷಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಈ ಎಲ್ಲ ಏಳು ಬೀಳುಗಳ ನಡುವೆ ಸಿಬಿಐ ಆರೋಪಿಗಳ ಹುಟ್ಟಡಗಿಸುವ ನಿಟ್ಟಿನಲ್ಲಿ ತನಿಖೆಯನ್ನು ಸ್ವತಃ ಕೈಗೆತ್ತಿಕೊಂಡಿದೆ. ಆದರೆ ಅಧಿಕಾರಿಗಳ ದಾರಿತಪ್ಪಿಸಲು ರಾಜಕಾರಣಿಗಳು ತಮ್ಮ ಬಲ ಪ್ರಯೋಗ ಮಾಡಬಾರದು ಎಂಬುವುದು ಜನತೆಯ ಮನವಿ ಪೂರ್ವಕ ಆಗ್ರಹವೂ ಆಗಿದೆ.