ಚೆನ್ನೈ: ತಮಿಳುನಾಡಿನ ವಿಪಕ್ಷ ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ) ಹಿರಿಯ ಶಾಸಕ ಜೆ. ಅನ್ಬಳಗನ್ ಕೊರೊನಾ ಸೋಂಕಿನಿಂದ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ.
ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ, ಅವರ ಆರೋಗ್ಯ ಸ್ಥಿತಿ ಸೋಮವಾರ ಸಂಜೆಯಿಂದ ಗಂಭೀರವಾಗಿತ್ತು, ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಬೆಳಗ್ಗೆ ಕೊನೆಯುಸಿರೆಳೆದರು.
ಡಾ.ರೆಲಾ ಇನ್ಸ್ ಟಿಟ್ಯೂಟ್ ಅಂಡ್ ಮೆಡಿಕಲ್ ಸೆಂಟರ್ ನಲ್ಲಿ ದಾಖಲಾಗಿದ್ದ 61 ವರ್ಷದ ಅನ್ಬಳಗನ್ ಆರೋಗ್ಯ ಸ್ಥಿತಿ ಬಿಗಡಾಯಿಸಿದ್ದರಿಂದ ಆಮ್ಲಜನಕದ ಪ್ರಮಾಣ ಅರ್ಧಕ್ಕೆ ಕುಸಿದಿತ್ತು. ಹೀಗಾಗಿ ಅವರ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡು ಬಂದಿರಲಿಲ್ಲ. ಜತೆಗೆ ವೈರಸ್ ಸೋಂಕಿನಿಂದ ರಕ್ತದೊತ್ತಡ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಡಾ. ರೆಲಾ ಆಸ್ಪತ್ರೆ ವೈದ್ಯಾಧಿಕಾರಿ ತಿಳಿಸಿದ್ದಾರೆ.
ತಮಿಳುನಾಡಿನಲ್ಲಿ ಜೂನ್ 9ರ ಲೆಕ್ಕಾಚಾರದಂತೆ ಒಟ್ಟು 34, 914 ಪ್ರಕರಣಗಳು ದಾಖಲಾಗಿದ್ದು, 18, 325 ಮಂದಿ ಗುಣಮುಖರಾಗಿದ್ದಾರೆ. 307 ಮಂದಿ ಮೃತರಾಗಿದ್ದಾರೆ. 6.2 ಲಕ್ಷಕ್ಕೂ ಅಧಿಕ ಸ್ಯಾಂಪಲ್ ಪರೀಕ್ಷೆ ನಡೆಸಲಾಗಿದೆ. ಒಂದೇ ದಿನದಲ್ಲಿ 1685 ಪ್ರಕರಣಗಳು ದಾಖಲಾಗಿ ಆತಂಕ ಹೆಚ್ಚಿಸಿದೆ. ಒಟ್ಟು 16, 279 ಸಕ್ರಿಯ ಪ್ರಕರಣಗಳಿವೆ.