ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಜಾತಿ, ಮತ ಭೇದವಿಲ್ಲದೆ ಸಮಾಜದ ಸರ್ವರಲ್ಲೂ ಸಮಾನವಾಗಿ ಕಂಡು ಎಲ್ಲರಿಗೂ ತ್ರಿವಿಧ ದಾಸೋಹ ನೀಡಿದ ಶ್ರೇಯಸ್ಸು ಚುಂಚಶ್ರೀ ಗಳಿಗೆ ಸಲ್ಲುತ್ತದೆ ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದ ನಾಥ ಸ್ವಾಮೀಜಿ ಬಣ್ಣಿಸಿದರು.
ಪದ್ಮಭೂಷಣ ಬಾಲಗಂಗಾಧರನಾಥ ಸ್ವಾಮೀಜಿ ಅವರ 76ನೇ ಜಯಂತ್ಯುತ್ಸವ ಹಾಗೂ 8ನೇ ವರ್ಷದ ಸಂಸ್ಮರಣಾ ಮಹೋತ್ಸವದ ಸಾನ್ನಿಧ್ಯ ಮತ್ತು ಅಧ್ಯಕ್ಷತೆ ವಹಿಸಿದ್ದ ಶ್ರೀ ನಿರ್ಮಲಾನಂದ ನಾಥ ಸ್ವಾಮೀಜಿ ಮಾತನಾಡಿ, ಡಾ.ಬಾಲಗಂಗಾಧರನಾಥ ಸ್ವಾಮೀಜಿ ಅನ್ನ, ಅಕ್ಷರ, ಆರೋಗ್ಯದ ಹರಿಕಾರರಾಗಿದ್ದರು ಎಂದು ಹೇಳಿದರು.
ಶ್ರೀಗಳು ಹಾಕಿಕೊಟ್ಟ ಸತ್ಸಂಪ್ರದಾಯ ಹಾಗೂ ಮಾರ್ಗದರ್ಶನದಿಂದಾಗಿ ಮಠ ಇಂದಿಗೂ ಸಮಾಜ ಪರ ಹಾಗೂ ದೀನ ದಲಿತರ ಪರವಾದ ಕೈಂಕರ್ಯ ಅನೂಚಾನವಾಗಿ ಮಾಡುತ್ತಿದೆ ಎಂದು ಸ್ವಾಮೀಜಿ ನುಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರು ಡಾ.ಬಾಲಗಂಗಾಧರನಾಥ ಸ್ವಾಮೀಜಿ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದರು.
ಆದಿಚುಂಚನಗಿರಿ ರಾಮನಗರ ಶಾಖಾ ಮಠದ ಅನ್ನದಾನೇಶ್ವರ ಸ್ವಾಮೀಜಿ ಹಾಗೂ ಬಿಜಿಎಸ್ ಪ್ರಗತಿ ಪರ ವೇದಿಕೆ ಕಾರ್ಯದರ್ಶಿ ಬಿ.ಎನ್ ಗಂಗಾಧರಯ್ಯ ನುಡಿ ನಮನ ಸಲ್ಲಿಸಿದರು.
ಇದಕ್ಕೂ ಮುನ್ನಾ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪರಮಪೂಜ್ಯ ಶ್ರೀ ಪದ್ಮಭೂಷಣ ಡಾ. ಬಾಲಗಂಗಾಧರನಾಥ ಮಹಾಸ್ವಾಮಿಯವರ 76ನೇ ಜಯಂತೋತ್ಸವದ ಸಂಸ್ಮರಣೋತ್ಸವದಲ್ಲಿ ಭಾಗಿಯಾಗಿ ಗೌರವ ನಮನಗಳನ್ನು ಸಲ್ಲಿಸಿದರು.