ಬೆಂಗಳೂರು: ಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಿಂದ ದೂರವಿದ್ದ ನಟಿ ರಾಗಿಣಿ ಡ್ರಗ್ಸ್ ಸೇವನೆ ಸಂಬಂಧ ವಿಧಿವಿಜ್ಞಾನ ಪ್ರಯೋಗಲಯದಿಂದ ಖಚಿತ ವರದಿ ಬರುತ್ತಿದ್ದಂತೆಯೇ ಕೊನೆಗೂ ಮೌನ ಮುರಿದಿದ್ದಾರೆ.
ಈ ಸಂಬಂಧ ಇನ್‍ಸ್ಟಾಗ್ರಾಂನಲ್ಲಿ ಸ್ಟೇಟಸ್ ಹಾಕಿರುವ ನಟಿ, ದೇವರ ಪ್ಲ್ಯಾನ್ ಬಗ್ಗೆ ನಿನ್ನಲ್ಲಿ ಎಷ್ಟು ಭರವಸೆ ಇರಬೇಕು ಅಂದರೆ, ನೀನು ಅಂದುಕೊಂಡಂತೆ ನಡೆಯದಿದ್ದರೂ ಬೇಸರ ಮಾಡಿಕೊಳ್ಳಬಾರದು. ಅಷ್ಟು ಆತ್ಮವಿಶ್ವಾಸ ಇರಬೇಕು ಎಂದು ಬರೆದುಕೊಂಡಿದ್ದಾರೆ.
ಸದ್ಯ ಮನೆಯಲ್ಲಿಯೇ ಇರುವ ರಾಗಿಣಿ, ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಫೋನ್ ಮೂಲಕ ತಮ್ಮ ಲಾಯರ್ ಜತೆ ಸಂಪರ್ಕದಲ್ಲಿದ್ದಾರೆ. ಕಾನೂನು ರೀತಿ ಮುಂದೆ ಏನು ಮಾಡಬೇಕು ಎಂಬುದರ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.
10 ತಿಂಗಳ ಬಳಿಕ ಹೈದರಾಬಾದ್‍ನ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಸಿಕ್ಕಿದ್ದು, ತಲೆಕೂದಲ ಪರೀಕ್ಷೆಯಲ್ಲಿ ನಟಿಯರ ಮಾದಕ ದ್ರವ್ಯ ಸೇವನೆ ದೃಢವಾಗಿದೆ. 2020ರ ಸೆಪ್ಟೆಂಬರ್ 13 ಕೆಸಿ ಜನರಲ್ ಆಸ್ಪತ್ರೆಯಲ್ಲಿ ರಕ್ತ, ಯೂರಿನ್ ಸ್ಯಾಂಪಲ್ ಸಂಗ್ರಹ ಮಾಡಲಾಗಿತ್ತು.
ಆದರೆ ತಾಂತ್ರಿಕ ದೋಷದಿಂದಾಗಿ ಮತ್ತೆ ಡಿಸೆಂಬರ್ 5ರಂದು ಕೋರ್ಟ್ ಅನುಮತಿ ಪಡೆದು, ಕೂದಲು, ರಕ್ತ, ಯೂರಿನ್ ಅಂಶಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳಿಸಲಾಗಿತ್ತು. ಈಗ ಎಫ್‍ಎಸ್‍ಎಲ್ ವರದಿಯಲ್ಲಿ ಡ್ರಗ್ಸ್ ಸೇವನೆ ಖಚಿತವಾಗಿದೆ. ಈ ಮೂಲಕ ಕರ್ನಾಟಕದಲ್ಲಿ ತಲೆ ಕೂದಲ ಮೂಲಕ ಡ್ರಗ್ಸ್ ಸೇವನೆ ಖಚಿತ ಆಗಿರೋದು ಇದೇ ಮೊದಲ ಕೇಸ್ ಎಂದು ಸಿಸಿಬಿ ಹೇಳಿದೆ.
ಡ್ರಗ್ಸ್ ಸೇವನೆ ಖಚಿತ, ಮುಂದೇನು?
ಡ್ರಗ್ಸ್ ಕೇಸಲ್ಲಿ ಕೂದಲು ಮೂಲಕ ಪತ್ತೆ ಹಚ್ಚಿರೋದು ರಾಜ್ಯದಲ್ಲಿ ಇದೇ ಮೊದಲ ಕೇಸ್ ಆಗಿದೆ. ರಾಗಿಣಿ, ಸಂಜನಾ ವಿರುದ್ಧ ಬೆಂಗಳೂರಿನ 33ನೇ ಸಿಸಿಎಚ್ ಕೋರ್ಟ್‍ಗೆ ಸಿಸಿಬಿ ಪೊಲೀಸರು 145 ಪುಟಗಳ ಆರೋಪಪಟ್ಟಿ ಸಲ್ಲಿಸಿದ್ದಾರೆ. ಎಫ್‍ಎಸ್‍ಎಲ್ ವರದಿ, ಸಿಸಿಬಿ ವಿಚಾರಣೆ ವೇಳೆ ಇಬ್ಬರ ವಿರುದ್ಧ ನಟರು ಕೊಟ್ಟಿರುವ ಹೇಳಿಕೆಯನ್ನು ಸಾಕ್ಷ್ಯವಾಗಿ ಉಲ್ಲೇಖಿಸಿದ್ದಾರೆ.
ಹೈದ್ರಾಬಾದ್ ಎಫ್‍ಎಸ್‍ಎಲ್ ರಿಪೋರ್ಟ್ ಬಗ್ಗೆ ಕೋರ್ಟ್ ಪರಿಶೀಲನೆ ನಡೆಸಲಿದೆ. ಇಬ್ಬರ ವಿಚಾರಣೆ ವೇಳೆ ಸರ್ಕಾರಿ ವಕೀಲರು ವಾದ ಮಂಡಿಸಲಿದ್ದಾರೆ. ಈ ವೇಳೆ ಪೂರಕ ಸಾಕ್ಷ್ಯ ಕೊಟ್ಟು ಪಬ್ಲಿಕ್ ಪ್ರಾಸಿಕ್ಯೂಟರ್ ವಾದ ಮಂಡಿಸಲಿದ್ದಾರೆ.
ವಿಚಾರಣೆ ಬಳಿಕ ಆರೋಪ ಸಾಬೀತಾದರೆ ಸಂಜನಾ, ರಾಗಿಣಿಗೆ ಕೋರ್ಟ್ ಶಿಕ್ಷೆ ವಿಧಿಸಬಹುದು. ಕೆಳ ನ್ಯಾಯಾಲಯದ ಆದೇಶ ಪ್ರಶ್ನಿಸಿ ನಟಿ ಮಣಿಯರು ಹೈಕೋರ್ಟ್ ಮೊರೆ ಹೋಗಬಹುದು.
ಇನ್ನು ಈಗ ಫ್‍ಎಸ್‍ಎಲ್ ವರದಿಯಲ್ಲಿ ಡ್ರಗ್ಸ್ ಸೇವನೆ ಖಚಿತವಾಗಿರುವುದರಿಂದ ನಟಿಯರು ಮುಂದಿನ ಕಾನೂನು ಹೋರಾಟದ ಬಗ್ಗೆ ತಮ್ಮ ವಕೀಲರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.