ಮೈಸೂರು: ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗುವಾಗ ನಾನು ಬೇಕಿತ್ತು. ಈಗ ಆ ಕೆಲಸ ಮುಗಿತ್ತಲ್ಲ. ಇನ್ನೇನು ಆ ದರ್ದು ಅವರಿಗಿಲ್ಲ. ಈಗ ಆರಾಮಾಗಿ ಇದ್ದಾರೆ. ನೋಡ್ಕೋತೀವಿ ಬಿಡಿ ಎಂದು ಚಾಮರಾಜನಗರದ ಬಿಜೆಪಿ ಸಂಸದ ವಿ.ಶ್ರೀನಿವಾಸಪ್ರಸಾದ್ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ವಿಚಾರ ಕುರಿತು ಗುರುವಾರ ಸುದ್ದಿಗಾರರ ಪ್ರಶ್ನೆಗೆ ಖಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಮಂತ್ರಿ ಪಟ್ಟವನ್ನು ನಾನೇ ಬೇಡ ಎಂದಿದ್ದೇನೆ. ಚುನಾವಣೆಯನ್ನೇ ಬೇಡ ಎಂದಿದ್ದವನು ನಾನು. ಇನ್ನು ಮಂತ್ರಿ ಪಟ್ಟ ಯಾಕೇ ಬೇಕು ನನಗೆ ಎಂದು ಸುದ್ದಿಗಾರರನ್ನೇ ಪ್ರಶ್ನಿಸಿದರು.
ಇನ್ನು ಹಳೇ ಮೈಸೂರು ಭಾಗಕ್ಕೆ ಸಚಿವ ಸ್ಥಾನ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಅಳಿಯ ಶಾಸಕ ಹರ್ಷವರ್ಧನ್ ಹೇಳಿಕೆ ವೈಯಕ್ತಿ ಎಂದ ಅವರು, ಹಳೇ ಮೈಸೂರು ಭಾಗಕ್ಕೆ ಈಗ ಸಾಕಾಗುವಷ್ಟು ಮಂತ್ರಿ ಸ್ಥಾನ ಇದೆ. ಸಿಎಂ ಹಳೇ ಮೈಸೂರು ಭಾಗದವರೇ. ಈಶ್ವರಪ್ಪ, ನಾರಾಯಣಗೌಡ, ಎಸ್.ಟಿ.ಸೋಮಶೇಖರ್ ಇವರೆಲ್ಲ ಹಳೇ ಮೈಸೂರಿನವರೇ. ಇನ್ನೆಷ್ಟು ಜನರನ್ನು ಗುಡ್ಡೆ ಹಾಕಿಕೊಳ್ತೀರಾ ಹೇಳಿ ಎಂದು ಅಸಮಾಧಾನದಿಂದಲೇ ಕೇಳಿದರು.
ನಿಗಮ ಮಂಡಳಿಗಳಿಗೆ ಮಾಡಿರುವ ಅಧ್ಯಕ್ಷರ ನೇಮಕ ವಿಚಾರವಾಗಿ ಮಾತನಾಡಿದ ಅವರು ಸಿಎಂ ಚರ್ಚೆ ನಡೆಸದೆ, ಯೋಚನೆ ಮಾಡದೆ ನೇಮಕಮಾಡಿ ಗೊಂದಲ ಉಂಟು ಮಾಡಿದ್ದಾರೆ. ಸಮರ್ಪಕವಾಗಿ ನೇಮಕಮಾಡದೆ ಎಡವಿದ್ದಾರೆ. ಈ ಕುರಿತು ನನಗೆ ಅತೃಪ್ತಿ ಇದೆ ಎಂದ ಅವರು, ಯಡಿಯೂರಪ್ಪ ಅವರ ಸ್ಥಿತಿ ಈಗ ಮುಳ್ಳಿನ ಮೇಲೆ ಪಂಚೆ ಹಾಕಿದಂತಾಗಿದೆ. ಅವರ ಹಾದಿ ಕಠಿಣವಾಗಿದ್ದು, ಬಹಳ ಹುಷಾರಾಗಿ ಹೆಜ್ಜೆ ಇಡಬೇಕಿದೆ ಎಂದು ಕಿವಿಮಾತು ಹೇಳಿದರು.
ಸಿದ್ದರಾಮಯ್ಯ ಅವರಿಗೆ ಅಧಿಕಾರವಿದ್ದರೂ ಬುದ್ಧಿವಂತಿಕೆ ಇರಲಿಲ್ಲ. ಹೀಗಾಗಿ ಅಧಿಕಾರ ಕಳೆದುಕೊಳ್ಳುವುದರ ಜತೆಗೆ ತಾವೇ ಸೋತುಹೋದರು. ಹೀಗಾಗಿ ಯಡಿಯೂರಪ್ಪ ಬುದ್ಧಿವಂತಿಕೆ ಉಪಯೋಗಿಸಬೇಕು. ತಾಳ್ಮೆಯಿಂದ ವರ್ತಿಸಬೇಕೆಂದು ಸಲಹೆ ನೀಡಿದರು.
ಸಚಿವ ಸಂಪುಟ ವಿಸ್ತರಣೆ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ವಿಚಾರ ಹೈಕಮಾಂಡ್ ಮತ್ತು ಯಡಿಯೂರಪ್ಪ ಅವರಿಗೆ ಬಿಟ್ಟಿದ್ದು, ಆದರೆ ಬೇಗನೆ ಈ ಸಮಸ್ಯೆ ಬಗೆಹರಿಸಬೇಕು ಎಂದರು.