ನ್ಯೂಡೆಲ್ಲಿ: ಕೋ-ಆಪರೇಟೀವ್ ಬ್ಯಾಂಕ್ ಗಳಲ್ಲಿ ಠೇವಣಿದಾರರ ಹಿತಾಸಕ್ತಿಯನ್ನು ಕಾಪಾಡಲು ಕೇಂದ್ರ ಸರ್ಕಾರ ಜೂ.26 ರಂದು ಸುಗ್ರೀವಾಜ್ಞೆ ಮೂಲಕ ಘೋಷಣೆ ಮಾಡಲಾಗಿದ್ದ ಬ್ಯಾಂಕ್ ನಿಯಂತ್ರಣ ಕಾಯ್ದೆ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಬುಧವಾರ ಅಂಗೀಕರಿಸಲಾಯಿತು.
ಕೋ-ಆಪರೇಟೀವ್ ಬ್ಯಾಂಕ್ ಗಳನ್ನು ಆರ್ ಬಿಐ ನ ಮೇಲ್ವಿಚಾರಣೆ ವ್ಯಾಪ್ತಿಗೆ ತರುವುದು ಈ ತಿದ್ದುಪಡಿ ಕಾಯ್ದೆಯ ಮುಖ್ಯ ಉದ್ದೇಶವಾಗಿದೆ. ಈ ಬ್ಯಾಂಕ್ ಗಳ ಆಡಳಿತ ಹಾಗೂ ಠೇವಣಿದಾರರ ಹಣ ರಕ್ಷಣೆ ಮಾಡುವುದು ಕಾಯ್ದೆಯ ಪ್ರಮುಖ ಉದ್ದೇಶವಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಕೋ-ಆಪರೇಟೀವ್ ಬ್ಯಾಂಕ್ ಗಳ ಪರಿಸ್ಥಿತಿ ಹದಗೆಟ್ಟಿದ್ದರಿಂದ ಲಾಕ್ ಡೌನ್ ಅವಧಿಯಲ್ಲಿ ತಿದ್ದುಪಡಿ ಕಾಯ್ದೆಯನ್ನು ಸುಗ್ರೀವಾಜ್ಞೆಯ ಮೂಲಕ ಜಾರಿಗೊಳಿಸಲಾಗಿತ್ತು ಎಂದು ತಿಳಿಸಿರುವ ಅವರು, ಮಾರ್ಚ್ 2019 ರಲ್ಲಿ ಶೇ.7.27 ರಷ್ಟಿದ್ದ ಕೋ-ಆಪರೇಟೀವ್ ಬ್ಯಾಂಕ್ ಗಳ ಎನ್ ಪಿಎ, 2020 ರ ಮಾರ್ಚ್ ವೇಳೆಗೆ ಶೇ.10ಕ್ಕೆ ಏರಿಕೆಯಾಗಿದೆ. 2018-19 ಆರ್ಥಿಕ ವರ್ಷದಲ್ಲಿ 277 ನಗರ ಸಹಕಾರಿ ಬ್ಯಾಂಕ್ ಗಳು ನಷ್ಟ ಎದುರಿಸಿವೆ. 100 ಕ್ಕೂ ಹೆಚ್ಚು ಬ್ಯಾಂಕ್ ಗಳು ಮಿನಿಮಮ್ ರೆಗ್ಯುಲೇಟರಿ ಕ್ಯಾಪಿಟಲ್ ರಿಕ್ವೈರ್ಮೆಂಟ್ ನ್ನೂ ಹೊಂದಿರಲಿಲ್ಲ. 47 ಬ್ಯಾಂಕ್ ಗಳು ನೆಗೆಟೀವ್ ನೆಟ್ ವರ್ತ್ ನ್ನು ಹೊಂದಿದ್ದವು ಎಂದು ಸಚಿವರು ತಿಳಿಸಿದ್ದಾರೆ.
ಠೇವಣಿದಾರರ ದೃಷ್ಟಿಯಿಂದ ಬ್ಯಾಂಕ್ ವಿಶ್ವಾಸದ ಭಂಡಾರವಾಗಿರುತ್ತದೆ. ಯಾವುದೇ ಆರ್ಥಿಕ ಸಂಸ್ಥೆ ಬ್ಯಾಂಕ್ ಎಂಬ ಪದ ಪ್ರಯೋಗಿಸಿದಾಕ್ಷಣ ಠೇವಣಿದಾರರು ಅದು ಆರ್ ಬಿಐ ನ ಮೇಲ್ವಿಚಾರಣೆ ಹಾಗೂ ಮಾರ್ಗದರ್ಶನದಲ್ಲಿ ನಡೆಯಲಿದೆ ಎಂದು ಭಾವಿಸಿ, ಠೇವಣಿದಾರರು ಸುರಕ್ಷಿತರಾಗಿರುತ್ತಾರೆ ಎಂದುಕೊಳ್ಳುತ್ತಾರೆ. ಠೇವಣಿದಾರನಿಗೆ ಕೋ-ಆಪರೇಟೀವ್ ಬ್ಯಾಂಕ್ ಗಳು ಹಾಗೂ ಬ್ಯಾಂಕ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವಾರು ಕಾನೂನುಗಳಿವೆ ಎಂಬುದು ತಿಳಿದಿರುವುದಿಲ್ಲ. ಇದೇ ಕಾರಣದಿಂದಾಗಿ ಯೆಸ್ ಬ್ಯಾಂಕ್, ಪಂಜಾಬ್-ಮಹಾರಾಷ್ಟ್ರ ಕೋ-ಆಪರೇಟೀವ್ ಬ್ಯಾಂಕ್, ಗುರುರಾಘವೇಂದ್ರ ಬ್ಯಾಂಕ್ ಸಹಕಾರ ಬ್ಯಾಂಕ್ ನ ಠೇವಣಿದಾರರು ಯಾತನೆ ಅನುಭವಿಸುತ್ತಿದ್ದಾರೆ ಎಂದು ಮಸೂದೆ ಜಾರಿ ಬಗ್ಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿವರಿಸಿದ್ದಾರೆ.