ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಕೊರೊನಾ ನಿಯಂತ್ರಣ ಕಾರ್ಯಪಡೆಯ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿಯೂ ಆದ ಡಾ. ಸಿ. ಎನ್. ಅಶ್ವತ್ಥನಾರಾಯಣ ಪ್ರಾರಂಭದಿಂದಲೂ ಲಸಿಕೆ ವಿತರಣೆಯಲ್ಲಿ ದುರ್ಬಳಕೆ, ಸ್ವಜನಪಕ್ಷಪಾತ , ಗೊಂದಲಗಳು, ತಾರತಮ್ಯ ಧೋರಣೆಯನ್ನು ಅನುಸರಿಸುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಹೀಗಾಗಿ ಈ ಕೂಡಲೇ ಕಾರ್ಯಪಡೆ ಅಧ್ಯಕ್ಷ ಹುದ್ದೆಯಿಂದ ವಜಾಗೊಳಿಸಬೇಕೆಂದು ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ರಾಜ್ಯಪಾಲರಲ್ಲಿ ಒತ್ತಾಯಿಸಿದ್ದಾರೆ.
ಶುಕ್ರವಾರ ನಗರದ ಪಕ್ಷ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಪ್ರತಿಯೊಂದು ವಿಧಾನಸಭಾ ಕ್ಷೇತ್ರಗಳಲ್ಲೂ ಇಂದು ಲಸಿಕೆ ವಿತರಣೆಯನ್ನು ಬಿಜೆಪಿಯ ವೋಟ್ ಬ್ಯಾಂಕ್ ರಾಜಕಾರಣಕ್ಕೆ ಬಳಸಿಕೊಳ್ಳಲು ಅನುವು ಮಾಡಿಕೊಟ್ಟಿದ್ದಾರೆ. ತಮ್ಮ ಸಾಂವಿಧಾನಿಕ ಹುದ್ದೆಯನ್ನು ಸಂಪೂರ್ಣ ದುರುಪಯೋಗ ಪಡಿಸಿಕೊಳ್ಳುತ್ತಿರುವ ಅಶ್ವತ್ಥನಾರಾಯಣ ಅವರ ನಡೆ ಖಂಡನೀಯ ಎಂದರು.
ಉಪ ಮುಖ್ಯಮಂತ್ರಿಗಳು ತಾವು ಸಮಸ್ತ ಕರ್ನಾಟಕ ರಾಜ್ಯಕ್ಕೆ ಕೊರೊನಾ ಮಹಾಮಾರಿಯನ್ನು ನಿಯಂತ್ರಿಸುವ ಕಾರ್ಯಪಡೆಯ ಅಧ್ಯಕ್ಷ ರು ಎಂಬುದನ್ನು ಮರೆತು ಕೇವಲ ತಾವು ಪ್ರತಿನಿಧಿಸುವ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರವನ್ನು ಗಮನದಲ್ಲಿಟ್ಟುಕೊಂಡು ಡಾ. ಸಿ. ಎನ್. ಅಶ್ವತ್ಥನಾರಾಯಣ ಫೌಂಡೇಷನ್ ಹೆಸರಿನಲ್ಲಿ ತಮ್ಮ ಬೆಂಬಲಿಗರು ಇರುವ ಪ್ರದೇಶಗಳಲ್ಲಿ ಮಾತ್ರ ಟೋಕನ್ ಗಳನ್ನು ಮೊದಲೇ ವಿತರಿಸಿ ಲಸಿಕೆಯನ್ನು ಹಾಕುತ್ತಿರುವುದು ಎಲ್ಲೆಡೆ ಕಂಡುಬರುತ್ತಿದೆ ಎಂದು ಆರೋಪಿಸಿದರು.
ಫ್ರಂಟ್ ಲೈನ್ ವಾರಿಯರ್ಸ್ ಗಳ ನೆಪದಲ್ಲಿ, ಆದ್ಯತೆಯ ನಿಯಮ ಹಾಗೂ ಕಂಪನಿಗಳ ಸಾಮಾಜಿಕ ಜವಾಬ್ದಾರಿಯ ನಿಧಿ ಅಡಿಯಲ್ಲಿ ದುರ್ಬಳಕೆ ಮಾಡಿಕೊಂಡು ಈ ರೀತಿಯ ಲಸಿಕೆ ವಿತರಣೆಯನ್ನು ಬಿಜೆಪಿ ತನ್ನ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಬಳಸಿಕೊಳ್ಳುತ್ತಿದೆ. ನಗರದ 27 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಈ ಅಕ್ರಮ ಚಟುವಟಿಕೆಗಳು ಅವ್ಯಾಹತವಾಗಿ ನಡೆಯುತ್ತಿದ್ದು ಇದಕ್ಕೆ ಡಿಸಿಎಂ ತಮ್ಮ ಹುದ್ದೆಯನ್ನು ದುರ್ಬಳಕೆ ಮಾಡಿಕೊಂಡು ಸಾಕಷ್ಟು ಇಂಬು ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.
ಜನತೆ ಬೆಳ್ಳಂ ಬೆಳಿಗ್ಗೆ ಲಸಿಕಾ ಕೇಂದ್ರಗಳಿಗೆ ಹೋದರೂ ಯಾರಿಗೂ ಲಸಿಕೆ ಸಿಗುವುದಿಲ್ಲ. ಕೇವಲ ಟೋಕನ್ ಹೊಂದಿರುವವರಿಗೆ ಮಾತ್ರ ಲಸಿಕೆ ನೀಡುತ್ತಿರುವುದು ಎಲ್ಲಾ ಲಸಿಕಾ ಕೇಂದ್ರಗಳಲ್ಲಿ ಕಾಣಸಿಗುತ್ತದೆ. ಈಗಾಗಲೇ ಆಮ್ ಆದ್ಮಿ ಪಕ್ಷವು ಈ ರೀತಿಯ ಲಸಿಕೆ ವಿತರಣೆ ಯಲ್ಲಿನ ಬಿಜೆಪಿಗರ ರಾಜಕಾರಣ , ಅಸಮಾನತೆ, ತಾರತಮ್ಯ ಧೋರಣೆಯ ವಿರುದ್ಧ ಸರ್ ಸಿ.ವಿ.ರಾಮನ್ ನಗರ , ಜಯನಗರ , ಬಸವನಗುಡಿ, ಬೊಮ್ಮನಹಳ್ಳಿ , ಗೋವಿಂದರಾಜನಗರ ಮುಂತಾದ ವಿಧಾನಸಭಾ ಕ್ಷೇತ್ರಗಳಲ್ಲಿ ಜನಸಾಮಾನ್ಯರೊಂದಿಗೆ ಜೊತೆಗೂಡಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ತಮ್ಮ ಅಸಮಧಾನವನ್ನು, ಪ್ರತಿಭಟನೆ ಮಾಡುವ ಮೂಲಕ ವ್ಯಕ್ತ ಪಡಿಸುತ್ತಿದ್ದಾರೆ.
ಜನಸಾಮಾನ್ಯನಿಗೆ ನ್ಯಾಯೋಚಿತವಾಗಿ ಸಿಗಬೇಕಿದ್ದ ಲಸಿಕೆಗಳು ಇಂದು ರಾಜಕೀಯ ಉದ್ದೇಶಗಳಿಂದ ಸಿಗದೆ ವಂಚಿತರಾಗುತ್ತಿದ್ದಾರೆ. ಈ ಗೊಂದಲಗಳಿಗೆ ನೇರವಾಗಿ ಕಾರಣಕರ್ತರಾಗಿರುವ ಕಾರ್ಯಪಡೆ ಅಧ್ಯಕ್ಷರನ್ನು ಈ ಕೂಡಲೇ ವಜಾಗೊಳಿಸಬೇಕೆಂದು ರಾಜ್ಯಪಾಲರಲ್ಲಿ ದೂರನ್ನು ಸಹ ನೀಡಲಾಗುವುದೆಂದು ಎಂದು ಮೋಹನ್ ದಾಸರಿ ತಿಳಿಸಿದರು.
ಪಕ್ಷದ ರಾಜ್ಯ ಹಿಂದುಳಿದ ವರ್ಗಗಳ ವಿಭಾಗದ ಉಪಾಧ್ಯಕ್ಷ ರಾಜಶೇಖರ ದೊಡ್ಡಣ್ಣ ಹಾಗೂ ಬೆಂಗಳೂರು ನಗರ ಎಸ್ಸಿ ಎಸ್ಟಿ ವಿಭಾಗದ ಅಧ್ಯಕ್ಷ ಜಯಕುಮಾರ್ ಭಾಗವಹಿಸಿದ್ದರು.