ಪಿರಿಯಾಪಟ್ಟಣ: ಕೋವಿಡ್ ಲಸಿಕೆ ಪಡೆಯುವುದರಿಂದ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ ಆದ್ದರಿಂದ ವಿದ್ಯಾರ್ಥಿಗಳು ಉದಾಸೀನ ಹಾಗೂ ಹುಂಬುತನ ಬಿಟ್ಟು ಲಸಿಕೆ ಪಡೆಯಿರಿ ಎಂದು ಶಾಸಕ ಕೆ.ಮಹದೇವ್ ಸಲಹೆ ನೀಡಿದರು.
ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಮಂಗಳವಾರ ಹಮ್ಮಿಕೊಂಡಿದ್ದ ಲಸಿಕಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೊರೊನಾ ವೈರಸ್ ನ ಮೊದಲನೇ ಅಲೆಯಲ್ಲಿ ಪ್ರಾರಂಭವಾದಗ ಔಷಧಿಯೂ ಇರಲಿಲ್ಲ ಮತ್ತು ಚಿಕಿತ್ಸೆಯೂ ಇರಲಿಲ್ಲ ಆದರೂ ಹೆಚ್ಚಿನ ಪ್ರಮಾಣದಲ್ಲಿ ಸಾವು ಕಂಡು ಬರಲಿಲ್ಲ. ಆದರೆ ಎರಡನೇ ಅಲೆ ಪ್ರಾರಂಭವಾಗಿ ಕೋವಿಡ್ ನಿಯಂತ್ರಣಕ್ಕಾಗಿ ಲಸಿಕೆ ಹಾಗೂ ಚಿಕಿತ್ಸೆ ನೀಡುತ್ತಿದ್ದರೂ ಸೋಂಕು ಹಾಗೂ ಸಾವಿನ ಪ್ರಮಾಣ ಕಡಿಮೆಯಾಗಿಲ್ಲ ಎಂದರು.
ಇನ್ನು ಕೋವಿಡ್ ಮಾಹಾಮಾರಿಗೆ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರೇ ಸಾವನ್ನಪ್ಪಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಮೂಢನಂಬಿಕೆ ಹೊರಗಿಟ್ಟು, ಸಂಕೋಚ ಅನುಮಾನಗಳಿಗೆ ಅವಕಾಶ ನೀಡದೆ ಲಸಿಕೆ ಹಾಕಿಸಿಕೊಳ್ಳಿ ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಶರತ್ ಬಾಬು ಮಾತನಾಡಿ, ಸರ್ಕಾರ ಸಂದಿಗ್ದ ಪರಿಸ್ಥಿತಿಯಲ್ಲಿದ್ದರೂ ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಸಾರ್ವಜನಿಕರಿಗೆ ಲಸಿಕೆ ನೀಡುವುದನ್ನು ಸ್ಥಗಿತಗೊಳಿಸಿ ಮೊದಲು ವಿದ್ಯಾರ್ಥಿಗಳಿಗೆ ಲಸಿಕೆ ನೀಡಲು ಆದೇಶಿಸಿದೆ ಇದರ ಸದುಪಯೋಗ ಪಡೆಯಿರಿ ಎಂದರು.
ಶೀಘ್ರದಲ್ಲೇ ಶಾಲಾ ಕಾಲೇಜುಗಳು ಪುನರಾರಂಭವಾಗಲಿದ್ದು ಈ ಸಂದರ್ಭದಲ್ಲಿ ಯಾರಿಗೂ ಸೋಂಕು ತಗಲಬಾರದು ಎಂಬ ಕಾರಣಕ್ಕೆ ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಗುತ್ತಿದೆ. ಈಗಾಗಲೇ 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳು ಶೇ.30 ರಷ್ಟು ವಿದ್ಯಾರ್ಥಿಗಳು ಪಡೆದಿದ್ದಾರೆ. ಈಗಲೂ ಪಡೆಯುತ್ತಿದ್ದು, ಲಸಿಕೆ ಪಡೆದ ವಿದ್ಯಾರ್ಥಿಗಳು ತಮ್ಮ ಮನೆ ಹಾಗೂ ಗ್ರಾಮಗಳಲ್ಲಿ ಸಾರ್ವಜನಿಕರಿಗೆ ಲಸಿಕೆ ಪಡೆಯುವ ಬಗ್ಗೆ ತಿಳಿವಳಿಕೆ ಹಾಗೂ ಜಾಗೃತಿ ಮೂಡಿಸುವಂತೆ ತಿಳಿಸಿದರು.
ಪ್ರಾಂಶುಪಾಲ ಡಾ.ದೇವರಾಜ್ ಮಾತನಾಡಿ, ಸದ್ಯದಲ್ಲೇ ಕೊರೊನಾ ಮೂರನೇ ಅಲೆ ಪ್ರಾರಂಭವಾಗಿ ಮಕ್ಕಳ ಮೇಲೆ ತೀವ್ರ ಪರಿಣಾಮ ಬೀರುವ ಬಗ್ಗೆ ಈಗಾಗಲೇ ತಜ್ಞರು ವರದಿ ನೀಡಿದ್ದಾರೆ. ಆದ್ದರಿಂದ ಆರೋಗ್ಯದ ದೃಷ್ಟಿಯಿಂದ ವಿದ್ಯಾರ್ಥಿಗಳು ಲಸಿಕೆ ಪಡೆದು ಸಾರ್ವಜನಿಕರಲ್ಲಿ ಲಸಿಕೆಯ ಮಹತ್ವದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕಿದೆ. ಪ್ರಥಮ ದರ್ಜೆ ಕಾಲೇಜಿನ 545 ವಿದ್ಯಾರ್ಥಿಗಳಿಗೂ ಲಸಿಕೆ ನೀಡಲಾಗುತ್ತಿದೆ ಎಂದರು.
ಪುರಸಭಾ ಸದಸ್ಯ ಪ್ರಕಾಶ್ ಸಿಂಗ್, ಮುಖಂಡರಾದ ರಘುನಾಥ್, ರಾಜು, ಉಪನ್ಯಾಸಕರಾದ ಪ್ರಸಾದ್, ರೀನಾ, ಪುಟ್ಟಮಾದಯ್ಯ, ಮಂಜುನಾಥ್ ಸೇರಿದಂತೆ ವಿದ್ಯಾರ್ಥಿಗು ಹಾಜರಿದ್ದರಿರು.