ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಕೊರೊನಾದಿಂದಾಗಿ ರಾಜ್ಯದಲ್ಲಿ ಲಾಕ್ಡೌನ್ ಹೇರಲಾಗಿದೆ. ಈ ನಡುವೆ ಜನ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದಕ್ಕೆ ಪರಿಹಾರವಾಗಿ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲು ಇಂದು (ಬುಧವಾರ) ಸಿಎಂ ನಿವಾಸದಲ್ಲಿ ಚರ್ಚೆ ಮಾಡುತ್ತೇವೆ ಎಂದು ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಜನರಿಗೆ ಆಗುತ್ತಿರುವ ತೊಂದರೆ ಮಾಧ್ಯಮಗಳಲ್ಲಿ ಬರುತ್ತಿರುವ ಮಾಹಿತಿಯಿಂದ ಗೊತ್ತಾಗುತ್ತಿದೆ. ಅದಕ್ಕೆ ನಾವು ಸಂಜೆ ಸಿಎಂ ಮನೆಯಲ್ಲಿ ಸಭೆ ಸೇರುತ್ತಿದ್ದೇವೆ ಎಂದರು.
ಸರ್ಕಾರದಿಂದ 600 ಆಕ್ಸಿಜನ್ ಕಾನ್ಸಂಟ್ರೇಟರ್ ನೀಡಲು ಮುಂದಾಗಿದ್ದೇವೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿಕೊಳ್ಳಿ ಅಲ್ಲಿ ನಿಮ್ಮನ್ನು ಯಾವ ಹಂತದಲ್ಲಿ ಇಟ್ಟು ಟ್ರೀಟ್ಮೆಂಟ್ ಕೊಡಬೇಕು ಎಂದು ಅವರು ನಿರ್ಧಾರ ಮಾಡುತ್ತಾರೆ ಎಂದರು.
ಇನ್ನು ಬೆಡ್ಗಳ ಲಭ್ಯತೆ ಬಗ್ಗೆ ರಿಯಾಲಿಟಿ ಚೆಕ್ ಮಾಡಲು ಅಧಿಕಾರಿಗಳನ್ನು ನೇಮಕ ಮಾಡಿದ್ದೇವೆ. ಸರ್ಕಾರದ ಒಬ್ಬ ಅಧಿಕಾರಿ ಡಾಕ್ಟರ್ ಜೊತೆಗೆ ಪಿಪಿಇ ಕಿಟ್ ಹಾಕಿಕೊಂಡು ರಿಯಾಲಿಟಿ ಚೆಕ್ ಮಾಡಬೇಕು. ಕಿಮ್ಸ್ ನಲ್ಲಿ ಇದೀಗ 30 ಆಕ್ಸಿಜನ್ ಬೆಡ್ ಕೊಡಲು ಮುಂದೆ ಬಂದಿದ್ದಾರೆ. ಬೆಂಗಳೂರಿನ 17 ಕಡೆ ಕೋವಿಡ್ ಕೇರ್ ಸೆಂಟರ್ ಇವೆ. ಅಲ್ಲಿ ಬಂದು ದಯವಿಟ್ಟು ಚಿಕಿತ್ಸೆ ಪಡೆದುಕೊಳ್ಳಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ವ್ಯಾಕ್ಸಿನ್ ಕೇಂದ್ರ ಸರ್ಕಾರದಿಂದ ಬರ್ತಿದೆ. ಅದನ್ನು ಎಲ್ಲಾ ಕಡೆ ತಲುಪಿಸುವ ಕಾರ್ಯದಲ್ಲೂ ತೊಡಗಿಕೊಂಡಿದ್ದೇವೆ. ಎಲ್ಲಾ ಜಿಲ್ಲೆಗಳಲ್ಲಿ ಆಕ್ಸಿಜನ್ ಕಾನ್ಸಂಟ್ರೇಟ್ ತೆಗೆದುಕೊಳ್ಳಲು ಆರ್ಡರ್ ಮಾಡಿದ್ದೇವೆ. ಡಿಸಿಗಳಿಗೆ ಇವತ್ತಿನಿಂದಲೇ ಆರ್ಡರ್ ಮಾಡಲು ಹೇಳಿದ್ದೇವೆ. ಡಿಸಾಸ್ಟರ್ ಮ್ಯಾನೆಜ್ಮೆಂಟ್ ಅಡಿಯಲ್ಲಿ 30 ಕೋಟಿ ರೂ. ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂದರು.
ಇನ್ನು ಹೊಸಕೆರೆ ಹಳ್ಳಿಯಲ್ಲಿ ಒಂದು ಕಟ್ಟಡ ನಿರ್ಮಾಣ ಆಗುತ್ತಿದೆ. ಅದನ್ನು ಮಕ್ಕಳ ಆಸ್ಪತ್ರೆ ಮಾಡುತ್ತೇವೆ. ಅದರ ಕೆಲಸ ಕಾರ್ಯಗಳು ಮುಂದುವರಿಯುತ್ತಿದ್ದು, ಪ್ರಾಯೋಗಿಕವಾಗಿ ಅಲ್ಲಿ ಏನ್ ಬೇಕು ಎಲ್ಲಾ ವ್ಯವಸ್ಥೆ ಮಾಡುತ್ತಿದ್ದೇವೆ ಎಂದು ವಿವರಿಸಿದರು.