ವಿಜಯಪಥ ಸಮಗ್ರ ಸುದ್ದಿ
ಪಿರಿಯಾಪಟ್ಟಣ: ತಾಲೂಕಿನ ಬೆಟ್ಟದಪುರ ಗ್ರಾಮದ ರೈತ ಮುಖಂಡ ಬಿ.ಜೆ.ದೇವರಾಜು ಎಂಬುವವರು ತಮ್ಮ ಮಗ ಬಿ.ಡಿ.ರತನ್ ಗೌಡ ಅವರ ಮದುವೆಯನ್ನು ಸರಳವಾಗಿ ಮಾಡುವ ಮೂಲಕ ದುಂದು ವೆಚ್ಚ ತಪ್ಪಿಸಿ ಮದುವೆಗಾಗಿ ಮೀಸಲಿಟ್ಟ ಎರಡು ಲಕ್ಷದ ಐದು ನೂರ ಒಂದು ರೂ.ಗಳನ್ನುಕೋವಿಡ್ ನಿರ್ವಹಣೆಗೆ ಬಳಸುವಂತೆ ಹೇಳಿ ತಾಲೂಕು ಆಡಳಿತಕ್ಕೆ ಶಾಸಕ ಕೆ.ಮಹದೇವ್ ಮೂಲಕ ತಹಸೀಲ್ದಾರ್ ಕೆ.ಚಂದ್ರಮೌಳಿ ಅವರಿಗೆ ಹಸ್ತಾಂತರ ಮಾಡಿದರು.
ದೇವರಾಜ್ ಮಾತನಾಡಿ, ನಮ್ಮ ಮಗನ ಮದುವೆಯನ್ನು ಕಳೆದ ಎರಡು ತಿಂಗಳ ಹಿಂದೆಯೇ ನಿಶ್ಚಯ ಮಾಡಿ ನಿಶ್ಚಿತಾರ್ಥ ಕೂಡ ಮಾಡಿ ಹತ್ತಾರು ಜನರಿಗೆ ಅನ್ನದಾನ ಮಾಡಿಸುವ ಬಯಕೆ ಹೊಂದುವ ಮೂಲಕ ದಿನಾಂಕ ನಿಗದಿಪಡಿಸಿದ್ದೆ. ಆದರೆ ಕಳೆದ ಒಂದು ತಿಂಗಳಿನಿಂದ ಕೊರೊನಾ ಎರಡನೇ ಅಲೆ ವಕ್ಕರಿಸಿದ ಕಾರಣ ನಾನು ಮಗನ ಮದುವೆಯನ್ನು ಮುಂದೂಡದೆ ಸರಳವಾಗಿ ನೆರವೇರಿಸಿ ಮದುವೆಗೆ ಮೀಸಲಿಟ್ಟ ರೂ. 205001 ರೂಪಾಯಿ ಚೆಕ್ಕನ್ನು ಶಾಸಕ ಕೆ.ಮಹದೇವ್ ಅವರ ಮೂಲಕ ತಾಲೂಕು ಆಡಳಿತಕ್ಕೆ ನೀಡಿ, ಮೂಲಕ ತಾಲೂಕಿನ ಕೋವಿಡ್ ಸೋಂಕಿತರಿಗೆ ಅಗತ್ಯ ಔಷಧ ಹಾಗೂ ಚಿಕಿತ್ಸೆಗೆ ಬಳಸಬೇಕು ಎಂದು ಮನವಿ ಮಾಡಿದ್ದಾಗಿ ತಿಳಿಸಿದರು.
ಶಾಸಕ ಕೆ.ಮಹದೇವ್ ಮಾತನಾಡಿ ಅದ್ದೂರಿ ಮದುವೆಗೆ ಆತೊರೆಯುವ ಈ ಕಾಲದಲ್ಲಿ ದುಂದು ವೆಚ್ಚಕ್ಕೆ ಕಡಿವಾಣ ಹಾಕುವ ಮೂಲಕ ತಮ್ಮ ಮಗನ ಮಸುವೆಯನ್ನು ಸರಳವಾಗಿ ಮಾಡಿ ಆ ಹಣವನ್ನು ಕೋವಿಡ್ ನಿರ್ವಹಣೆಗೆ ನೀಡಿರುವ ಬಿ.ಜೆ.ದೇವರಾಜುರವರ ಕಾರ್ಯ ಶ್ಲಾಘನೀಯ. ಇದೇ ರೀತಿ ಎಲ್ಲರೂ ಸಂಕಷ್ಟದ ಸಮಯದಲ್ಲಿ ದುಂದು ವೆಚ್ಚಕ್ಕೆ ಕಡಿವಾಣ ಹಾಕುವ ಮೂಲಕ ತಮ್ಮ ಕೈಲಾದ ಸೇವೆಯನ್ನು ಮಾಡಿ ನೊಂದವರಿಗೆ ಆಸರೆಯಾಗಬೇಕು . ಈ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದರು.
ತಹಸೀಲ್ದಾರ್ ಕೆ.ಚಂದ್ರಮೌಳಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸಿ.ಆರ್.ಕೃಷ್ಣಕುಮಾರ್, ಟಿಎಚ್ಒ ಡಾ.ಶರತ್ ಬಾಬು, ಬಿಇಒ ವೈ.ಕೆ.ತಿಮ್ಮೇಗೌಡ, ಪುರಸಭಾ ಆರೋಗ್ಯ ನಿರೀಕ್ಷಕರಾದ ಆದರ್ಶ, ಪ್ರದೀಪ್ ಕುಮಾರ್, ಮುಖಂಡರಾದ ಅಣ್ಣಯ್ಯ ಶೆಟ್ಟಿ, ಎ.ಟಿ.ರಂಗಸ್ವಾಮಿ, ದೊಡ್ಡಮೊಗೇಗೌಡ, ಆವರ್ತಿಸೋಮಶೇಖರ್, ರಾಮಂಪುರ ಕಾಂತರಾಜ್, ಎಚ್.ಕೆ.ಮಹೇಶ್ ಇದ್ದರು.