ವಿಜಯಪಥ ಸಮಗ್ರ ಸುದ್ದಿ
ನ್ಯೂಡೆಲ್ಲಿ: ಕೋವಿಡ್ ಪಿಡುಗು ಇಡೀ ಜಗತ್ತನ್ನು ಕಾಡಲು ಆರಂಭಿಸಿದ ವರ್ಷದಲ್ಲೇ ಅದರ ವಿರುದ್ಧದ ಲಸಿಕೆ ಸಿದ್ಧವಾಗಿದೆ. ಎರಡು ಲಸಿಕೆಗಳನ್ನು ಹೊಂದಿರುವ ಭಾರತ, ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಲು ಸಂಪೂರ್ಣವಾಗಿ ಸಜ್ಜಾಗಿದೆ.
ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ಇದೇ ತಿಂಗಳ 13ರೊಳಗೆ ಕೋವಿಡ್ ಲಸಿಕೆಯ ತುರ್ತು ಬಳಕೆ ಆರಂಭಿಸಲು ಸಿದ್ಧ’ ಎಂದು ಹೇಳಿದ್ದಾರೆ.
ಆಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ಯುನಿವರ್ಸಿಟಿ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್ ಮತ್ತು ಭಾರತ್ ಬಯೊಟೆಕ್ ಅಭಿವೃದ್ಧಿಪಡಿಸಿರುವ ಕೋವ್ಯಾಕ್ಸಿನ್ ಲಸಿಕೆಗಳ ತುರ್ತು ಬಳಕೆಗೆ ಭಾರತದ ಔಷಧ ಮಹಾನಿಯಂತ್ರಕರು ಭಾನುವಾರ ಅನುಮೋದನೆ ನೀಡಿದ್ದಾರೆ. ಹಾಗಾಗಿ, ಕೋವಿಡ್ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಲು ಹಾದಿ ಸುಗಮವಾಗಿದೆ ಎಂದು ವಿವರಿಸಿದರು.
ಎರಡು ಲಸಿಕೆಗಳ ಬಳಕೆಗೆ ಜನವರಿ ಮೂರರಂದು ಅನುಮೋದನೆ ನೀಡಲಾಗಿದ್ದು, ತಾಲೀಮು ಹಂತದಲ್ಲಿನ ಪ್ರತಿಕ್ರಿಯೆ ಆಧಾರದ ಮೇಲೆ 10 ದಿನಗಳೊಳಗೆ ಕೋವಿಡ್-19 ಲಸಿಕೆ ಹೊರತರಲು ಸಿದ್ಧತೆ ನಡೆಸಲಾಗಿದೆ ಎಂದು ತಿಳಿಸಿದರು.
ವಿಶ್ವದಲ್ಲಿಯೇ ಅಮೆರಿಕ ಹೊರತುಪಡಿಸಿ ಅತ್ಯಂತ ಹೆಚ್ಚಿನ ಕೊರೊನಾ ವೈರಸ್ ಪ್ರಕರಣಗಳನ್ನು ಹೊಂದಿರುವ ಭಾರತಕ್ಕೆ ತುಸು ನೆಮ್ಮದಿಯನ್ನುಂಟು ಮಾಡಿದೆ. ಮೊದಲ ಬಾರಿಗೆ 1 ಕೋಟಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುವುದು, ಜೊತೆಗೆ ಎರಡು ಕೋಟಿ ಮುಂಚೂಣಿ ಕಾರ್ಯಕರ್ತರು, ಅವಶ್ಯಕ ಕಾರ್ಯಕರ್ತರು ಮತ್ತು 27 ಕೋಟಿ ವೃದ್ಧ , 50 ವರ್ಷಕ್ಕೂ ಮೇಲ್ಪಟ್ಟ ಹಿರಿಯ ವ್ಯಕ್ತಿಗಳಿಗೆ ನೀಡಲಾಗುತ್ತಿದೆ.