ಬೆಂಗಳೂರು: ವೈದ್ಯಕೀಯ ವಿದ್ಯಾರ್ಥಿಯೊಬ್ಬ ಯುವತಿಯ ಖಾಸಗಿ ವಿಡಿಯೋ ಇಟ್ಟುಕೊಂಡು ದೈಹಿಕ ಸಂಪರ್ಕ ಬೆಳೆಸಲು ಪೀಡಿಸುತ್ತಿದ್ದರಿಂದ ಭಯಗೊಂಡ ಸಂತ್ರಸ್ತ ಯುವತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಮೈಸೂರು ಮೂಲದ ವೈದ್ಯಕೀಯ ವಿದ್ಯಾರ್ಥಿ ರಾಬರ್ಟ್ ರೋಷನ್ ಎಂಬುವವನ ವಿರುದ್ಧ ವೈಟ್ ಫೀಲ್ಡ್ ಸೈಬರ್ ಪೊಲೀಸರಿಗೆ ಮಾರತ್ಹಳ್ಳಿಯ 20 ವರ್ಷದ ಯುವತಿ ದೂರು ನೀಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಕೆಲವು ತಿಂಗಳ ಹಿಂದೆ ಪರಿಚಿತನಾಗಿದ್ದ ಆರೋಪಿ ತಾನು ವೈದ್ಯಕೀಯ ವಿದ್ಯಾರ್ಥಿ ಎಂದು ಹೇಳಿಕೊಂಡು ನನ್ನೊಂದಿಗೆ ಚಾಟ್ ಮಾಡುತ್ತಿದ್ದು, ನಂತರದಲ್ಲಿ ಇಬ್ಬರು ಸ್ನೇಹಿತರಾಗಿದ್ದವು.
ಹೀಗಾಗಿ ಮಾರ್ಚ್ ನಲ್ಲಿ ಬೆಂಗಳೂರಿಗೆ ಬಂದಿದ್ದ ಆರೋಪಿ ನನ್ನೊಂದಿಗೆ ಸುತ್ತಾಡಿದ್ದ. ಈ ವೇಳೆ ನನ್ನೊಂದಿಗಿದ್ದ ಕ್ಷಣಗಳನ್ನು ಚಿತ್ರೀಕರಿಸಿಕೊಂಡಿದ್ದಾನೆ. ಬಳಿಕ ಫೋಟೋಗಳನ್ನು ಕಳುಹಿಸಿ ಅಶ್ಲೀಲವಾಗಿ ಚಾಟಿಂಗ್ ಮಾಡುತ್ತಿದ್ದ ಆತ ದೈಹಿಕ ಸಂಪರ್ಕ ಬೆಳೆಸುವಂತೆ ಬಲವಂತ ಮಾಡುತ್ತಿದ್ದ. ಅಲ್ಲದೆ ನನ್ನ ಸಹೋದರಿಯ ಖಾಸಗಿ ಫೋಟೋ ಕಳುಹಿಸಿಕೊಡುವಂತೆ ಪೀಡಿಸಿದ್ದಾನೆ ಎಂದು ಯುವತಿ ಆರೋಪಿಸಿ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.