ಬೆಂಗಳೂರು: ನಾವು 9 ಜನ ಒಡಹುಟ್ಟಿದವರು ಬೆಳೆದ ಮನೆಯನ್ನು ಕಿಡಿಗೇಡಿಗಳು ಸುಟ್ಟುಹಾಕಿದ್ದಕ್ಕೆ ಭಾವನಾತ್ಮಕ ಸಂಬಂಧವನ್ನು ನೆನೆದು ಪುಲಕೇಶಿನಗರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಕಣ್ಣೀರಿಟ್ಟಿದ್ದಾರೆ.
ಸರ್ಕಾರ ಸಿಬಿಐ, ಸಿಐಡಿ ಯಾವುದಾದರೊಂದು ತನಿಖೆಯನ್ನು ಸೂಕ್ತವಾಗಿ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಇದೇವೇಳೆ ಮನವಿ ಮಾಡಿದ್ದಾರೆ.
ಘಟನೆ ಬಗ್ಗೆ ಮಾಹಿತಿ ಪಡೆಯಲು ಕಂದಾಯ ಸಚಿವ ಆರ್.ಅಶೋಕ್ ಅಖಂಡ ಶ್ರೀನಿವಾಸಮೂರ್ತಿ ನಿವಾಸಕ್ಕೆ ಭೇಟಿ ನೀಡಿದರು. ಭೇಟಿ ವೇಳೆ ತಮಗೂ ಕುಟುಂಬದ ಸದಸ್ಯರಿಗೆ ಸೂಕ್ತ ಕಾನೂನು ಭದ್ರತೆ ನೀಡುವಂತೆ ಮನವಿ ಮಾಡಿದರು.
ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಶ್ರೀನಿವಾಸಮೂರ್ತಿ, ಕಳೆದ 25 ವರ್ಷಗಳಿಂದ ಇಂತಹ ಘಟನೆ ನಡೆದಿರಲಿಲ್ಲ. ತಂದೆತಾಯಿ ಸಹೋದರರ ಜತೆ ವಾಸವಾಗಿದ್ದ ಮನೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಹುಟ್ಟಿ ಬೆಳೆದ ಮನೆಯನ್ನು ಸುಟ್ಟುಹಾಕಿದ್ದಾರೆಂದು ಕಣ್ಣೀರಿಟ್ಟರು.
ಪ್ರಕರಣದ ಬಗ್ಗೆ ವಿವರಿಸಿದ ಅವರು, ನಮ್ಮ ಮನೆ ಮೇಲೆ ಸುಮಾರು ನಾಲ್ಕು ಸಾವಿರ ಜನ ದಾಳಿ ಮಾಡಿದ್ದಾರೆ. ಮಾರಕಾಸ್ತ್ರ ಪೆಟ್ರೋಲ್ ಬಾಂಬ್ ಬಳಸಿ ಮನೆಗೆ ಬೆಂಕಿ ಹಚ್ಚುವ ಕೃತ್ಯ ಮಾಡಿದ್ದಾರೆ. ಘಟನೆಗೆ ಕಾರಣರಾದವರು ಯಾರೇ ಆಗಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದು ಹೇಳಿದರು.
ನವೀನ್ ನನ್ನ ಅಕ್ಕನ ಮಗ. ಅವನಿಗೂ ನಮಗೂ ಯಾವುದೇ ಸಂಪರ್ಕವಿಲ್ಲ. ಘಟನೆಯ ಹಿಂದೆ ಯಾರೇ ಇದ್ದರೂ ಶಿಕ್ಷೆಯಾಗಬೇಕು. ಮನೆಯಲ್ಲಿ ಚಿನ್ನಾಭರಣ ಲೂಟಿ ಮಾಡಿದ್ದಾರೆ. ಸಚಿವ ಅಶೋಕ್ ಮನೆಗೆ ಬಂದು ನಮಗೆ ಧೈರ್ಯ ಹೇಳಿದ್ದಾರೆ ಎಂದರು.