ಮೈಸೂರು: ಅತ್ಯಾಚಾರ ಪ್ರಕರಣದ ಆರೋಪಿಯ ಜಾಮೀನು ರದ್ದುಪಡಿಸಿ, ಆತನನ್ನು ಬಂಧಿಸುವುದಕ್ಕೆ ಲಂಚ ಪಡೆಯುತ್ತಿದ್ದ ಪೊಲೀಸ್ ಇನ್‌ಸ್ಪೆಕ್ಟರ್ ಹಾಗೂ ಕಾನ್‌ಸ್ಟೆಬಲ್ ಇಬ್ಬರೂ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ 75 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ಬಂಧಿಸಲಾಗಿದೆ. ಮೇಟಗಳ್ಳಿ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಭೀಮಣ್ಣ ಎಸಿಬಿ ಬಲೆಗೆ ಬಿದ್ದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನ್‌ಸ್ಟೆಬಲ್ ಭೀಮಣ್ಣನ ಮೂಲಕ ಇನ್‌ಸ್ಪೆಕ್ಟರ್ ರಾಘವೇಂದ್ರ ಲಂಚದ ಹಣ ಪಡೆಯುತ್ತಿದ್ದ ಎಂದು ಹೇಳಲಾಗಿದೆ.
ಅತ್ಯಾಚಾರ ಆರೋಪಿಯನ್ನು ಬಂಧಿಸಬೇಕು ಮತ್ತು ಆತನಿಗೆ ನೀಡುವ ಬೇಲ್ ಅನ್ನು ರದ್ದುಪಡಿಸಲು ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಿ ಎಂದು ಸಂತ್ರಸ್ತೆ ನೆರವಿಗೆ ಬಂದವರಿಂದಲೇ 75 ಸಾವಿರ ರೂ. ಲಂಚದ ಹಣ ಕೇಳಿದ್ದರು. ಇದರಿಂದ ಎಸಿಬಿ ಇನ್ಸ್‌ಪೆಕ್ಟರ್ ವಿರುದ್ಧ ದೂರು ನೀಡಿದ್ದ ಹಿನ್ನೆಲೆಯಲ್ಲಿ ಆತ ಕಾನ್‌ಸ್ಟೆಬಲ್ ಮೂಲಕ ಲಂಚದ ಹಣ ಪಡೆಯುತ್ತಿದ್ದಾಗ ಬಂಧಿಸಲಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸ್ ಠಾಣೆಗಳಲ್ಲಿ ರಕ್ಷಕರೆ ಭಕ್ಷಕರಾದರೆ ನೊಂದವರಿಗೆ ನ್ಯಾಯ ಎಲ್ಲಿ ಸಿಗುತ್ತದೆ ಎಂದು ನೊಂದ ಸಂತ್ರಸ್ತೆ ಅಳಲನ್ನು ತೋಡಿಕೊಂಡಿದ್ದಾರೆ. ಇನ್ನು ಈ ರೀತಿ ಲಂಚಕ್ಕೆ ಕೈ ಚಾಚುವವರಿಗೆ ಸರಿಯಾದ ಬುದ್ಧಿಕಲಿಸಬೇಕು ಎಂದು ಉನ್ನತ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.