ಬೆಂಗಳೂರು: ಮುಷ್ಕರದ ಸಮಯದಲ್ಲಿ ವಜಾ ಮಾಡಿರುವ ನೌಕರರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಬೇಕೆಂದರೆ 50 ಸಾವಿರ ರೂ.ಗಳಿಂದ ಒಂದು ಲಕ್ಷ ರೂ. ವರೆಗೆ ಲಂಚ ಕೊಡಬೇಕೆಂದು ಅಧಿಕಾರಿಗಳು ಆಗ್ರಹಿಸುತ್ತಿದ್ದಾರೆ ಎಂಬ ಸ್ಫೋಟಕ ಮಾಹಿತಿ ಹೊರ ಬಿದ್ದಿದೆ.
ಹೌದು! ತುಮಕೂರು ಜಿಲ್ಲೆ ಮಧುಗಿರಿ ಕೆಎಸ್‌ಆರ್‌ಟಿಸಿ ಘಟದಲ್ಲಿ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಚಂದ್ರನಾಯಕ್ ಎಂಬುವರನ್ನು ಮುಷ್ಕರದ ವೇಳೆ ವಜಾ ಮಾಡಿದ್ದು, ಮತ್ತೆ ಅವರ ವಜಾವನ್ನು ರದ್ದುಮಾಡಿ ಕರ್ತವ್ಯಕ್ಕೆ ಮರು ಸೇರ್ಪಡೆ ಮಾಡಿಕೊಳ್ಳಲು ಡಿಸಿ ಬಸವರಾಜ್ ಅವರು 50 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಚಂದ್ರ ನಾಯಕ್ ಅವರ ಪತ್ನಿ ಶಶಿಕಲಾ ಆರೋಪಿಸಿದ್ದಾರೆ.
50 ಸಾವಿರ ರೂ. ಕೊಟ್ಟ ಮೇಲೆ ವಜಾ ಆದೇಶ ರದ್ದು ಮಾಡುವುದಾಗಿ ಹೇಳಿದ್ದಾರೆ ಎನ್ನಲಾಗಿದೆ. ಇದರಿಂದ ಡಿಪೋಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದ ನನ್ನ ಗಂಡ ಮನಗೆ ಬಂದಿಲ್ಲ. ಹೀಗಾಗಿ ನಾನು ನಮ್ಮ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಡಿಸಿ ಮನೆಯ ಮುಂದೆ ಕೂರುತ್ತೇವೆ ಎಂದು ಶಶಿಕಲಾ ತಿಳಿಸಿದ್ದಾರೆ.
50 ಸಾವಿರ ರೂ. ಲಂಚಕ್ಕಾಗಿ ನಮಗೆ ಏಕೆ ತೊಂದರೆ ಕೊಡಬೇಕು. ಡಿಸಿ ಬಸವರಾಜ್ ತುಂಬ ಲಂಚಕೋರ, ಭ್ರಷ್ಟ ಅಧಿಕಾರಿ, ಅವರು ಬಡವರ ಹೊಟ್ಟೆ ಮೇಲೆ ತುಂಬಾನೆ ಹೊಡಿಯುತ್ತಿದ್ದಾರೆ. ಈ ರೀತಿ ಹಲವರನ್ನು ವಜಾ ಮಾಡಿ ಹಲವು ನೌಕರರ ಕುಟುಂಬದವರನ್ನು ಬೀದಿಗೆ ತಂದಿದ್ದಾರೆ. ಆ ಕುಟುಂಬಗಳು ಕಣ್ಣೀರು ಹಾಕುತ್ತಿವೆ ಎಂದು ಅಳಲು ತೋಡಿಕೊಂಡಿದ್ದಾರೆ.
ನಮ್ಮನ್ನೆಲ್ಲ ಜೀತದ ಆಳುಗಳಾಗಿ ಮಾಡಿಕೊಂಡಿದ್ದಾರಾ?
ನಾವು ನ್ಯಾಯ ಕೇಳಲು ಡಿಸಿ ಆಫೀಸ್‌ಗೆ ಹೋದರೆ ಅಲ್ಲ ಕುಳಿತುಕೊಳ್ಳು ಸರಿಯಾದ ಆಸನಗಳ ವ್ಯವಸ್ಥೆಯೂ ಇಲ್ಲ. ನಮ್ಮನ್ನೆಲ್ಲ ಜೀತದ ಆಳುಗಳಾಗಿ ಮಾಡಿಕೊಂಡಿದ್ದಾರಾ? ಈ ಅಧಿಕಾರಿಗಳು ಎರಡುದಿನ ಬಸ್‌ನಲ್ಲಿ ಡ್ಯೂಟಿ ಮಾಡಲಿ ಎಷ್ಟು ಬಾಡಿಪೇನ್ ಆಗುತ್ತೆ, ಆರೋಗ್ಯ ಎಷ್ಟು ಹಾಳಾಗುತ್ತದೆ. ಅಷ್ಟೆಲ್ಲ ಮಾಡಿದ್ದರೂ ಸರಿಯಾದ ವೇತನ ಕೊಡುತ್ತಿಲ್ಲ, ಇನ್ನು ಸಿಗುತ್ತಿರುವ ಸಂಬಳದಲ್ಲೇ ಹೇಗೋ ಜೀವನ ಮಾಡುತ್ತಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ನಮ್ಮ ಇಬ್ಬರು ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಸಾಲಸೋಲ ಮಾಡಿ ಶಾಲೆಗೆ ಕಳುಹಿಸುತ್ತಿದ್ದೇವೆ. ಈ ನಡುವೆ 50 ಸಾವಿರ ರೂ.ಗಳಿಗೆಗಾಗಿ ಅಧಿಕಾರಿಗಳು ಇಡಿ ಕುಟುಂಬದ ಜೀವನವನ್ನು ಹಾಳು ಮಾಡುತ್ತಾರೆ ಎಂದರೆ ಏನು ಇದು. ಹೇಗೆ ಬದುಕ ಬೇಕು ನಾವು? ಈ ಅನ್ಯಾಯ ಕೇಳಲಿಕ್ಕೆ ಯಾರು ಇಲ್ಲವಾ?
ನಾನು ಡಿಸಿ ಬಸವರಾಜ್ ಅವರ ವಿರುದ್ಧ ದೂರು ಕೊಡುತ್ತೇನೆ, ನನ್ನ ಜೀವನಾಂಶವನ್ನು ಅವರೇ ಕಟ್ಟಿಕೊಡಬೇಕು. ನಮ್ಮ ಮಕ್ಕಳಿಗೆ ಶಿಕ್ಷಣವನ್ನು ಅವರೇ ಕೊಡಿಸಬೇಕು. ಮುಂದಿನ ಜೀವನಕ್ಕೂ ಅವರೇ ದಾರಿಯಾಗಬೇಕು.
ನಾವು ಅವರ ಮನೆ ಹತ್ತಿರ ಹೋಗುತ್ತೇವೆ. ನಮ್ಮನ್ನು ಸಾಕಲಿ. ನನ್ನ ಗಂಡ ನಮ್ಮನ್ನು ಸಾಕುತಿರಲಿಲ್ಲವ. ಬಡವರ ಹೊಟ್ಟೆ ಮೇಲೆ ಹೊಡಿತ್ತಿದ್ದಾರೆ. ವಜಾ ಮಾಡಿ ಜೀವನ ನಿರ್ವಾಹಣೆಗೂ ಇದ್ದ ಕೆಲಸವನ್ನು ಕಸಿದುಕೊಂಡಿದ್ದಾರೆ. ಇದರಿಂದ ಮನೆ ಬಾಡಿಗೆ ಕಟ್ಟಲಾಗದೆ ಬಾಡಿಗೆ ಮನೆ ಬಿಟ್ಟು ಈಗ ತಾಯಿಯ ಮನೆ ಸೇರಿದ್ದೇವೆ ಎಂದು ಅಳಲು ತೋಡಿಕೊಂಡಿದ್ದಾರೆ.
ಅವರಿಗೆ ಲಂಚ ಕೊಡುವುದಕ್ಕೆ ಕೈ ತುಂಬ ಸಂಬಳ ಕೊಡುತ್ತಿದೆಯ ಸಂಸ್ಥೆ. ಇಲ್ಲ ನಮ್ಮಪ್ಪ, ನನ್ನ ಗಂಡ ಕೋಟ್ಯಂತರೂ ಸಂಪಾದಿಸಿ ಇಟ್ಟಿದ್ದಾರಾ? ಕೊಡಲಿಕ್ಕೆ. ನಾಚಿಕೆ ಆಗಲ್ವ ಲಂಚ ಕೇಳಲಿಕ್ಕೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಈ ಸಂಬಂಧ ಡಿಸಿ ಬಸವರಾಜ್ ಅವರ ಮೊ.ನಂ: 7790…..00ಗೆ ವಿಜಯಪಥ ಕರೆ ಮಾಡಿದಾಗ ವ್ಯಾಪ್ತಿಪ್ರದೇಶ ಹೊರಗಿದ್ದಾರೆ ಎಂದು ಬರುತ್ತಿತ್ತು.
ಹೈ ಕೋರ್ಟ್‌ನಲ್ಲಿ ಪ್ರಕರಣ ಇದೆ. ಹೀಗಾಗಿ ನೌಕರರಲ್ಲಿ ತಾಳ್ಮೆ ಇರಬೇಕು. ಈಗಲಾದರೂ ಬುದ್ದಿ ಕಲಿಯಿರಿ, ಕೋರ್ಟ್‌ನಲ್ಲಿ ಪ್ರಕರಣವಿದೆ. ಆ ಪ್ರಕರಣ ಇತ್ಯರ್ಥ ಆಗುವವರೆಗೂ ಯಾರು ಎಲ್ಲಿಗೂ ಹೋಗಬೇಡಿ. ಅಷ್ಟೊಂದು ಆತುರ ಪಡುವುದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿರುತ್ತದೆ. ಆದ್ದರಿಂದ ಕೋರ್ಟ್‌ನಲ್ಲಿ ಪ್ರಕರಣ ಮುಗಿಯುವವರೆಗೂ ತಾಳ್ಮೆಯಿಂದ ನಡೆದುಕೊಳ್ಳುವುದು ಉತ್ತಮ.
l ಎಚ್.ಬಿ.ಶಿವರಾಜು, ವಕೀಲರು, ಸುಪ್ರೀಂಕೋರ್ಟ್ ಹಾಗೂ ಹೈ ಕೋರ್ಟ್
ವಜಾಗೊಂಡ ಸಾರಿಗೆ ನೌಕರರಿಗೆ ಒಂದು ಕಡೆ ಸಿಹಿ ಮತ್ತೊಂದು ಕಡೆ ಕಹಿ: ಮಾನವೀಯತೆಯನ್ನೇ ಮರೆತ ಅಧಿಕಾರಿಗಳು