ಬೆಂಗಳೂರು: ಯುವಕನೊಬ್ಬನನ್ನು ಬಂಧನದಲ್ಲಿಟ್ಟು ಸತತ ಚಿತ್ರಹಿಂಸೆ ನೀಡಿ ಆತ ಕೈಕಳೆದುಕೊಳ್ಳುವಂತೆ ಮಾಡಿದ ವರ್ತೂರು ಠಾಣೆಯ ಪೊಲೀಸ್ ಅಧಿಕಾರಿಗಳ ವಿರುದ್ಧ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಬೆಂಗಳೂರು ಜಿಲ್ಲಾಧ್ಯಕ್ಷ ಸೈಯ್ಯದ್ ಜಾವೇದ್ ಆಗ್ರಹಿಸಿದ್ದಾರೆ.
ಕಳ್ಳತನ ಪ್ರಕರಣವೊಂದರ ತನಿಖೆಗೆ ಸಂಬಂಧಿಸಿದಂತೆ ಸಲ್ಮಾನ್ ಖಾನ್ ಎಂಬ ಯುವಕನನ್ನು ವರ್ತೂರು ಪೊಲೀಸರು ಅಕ್ಟೋಬರ್ 27ರಂದು ಬಂಧಿಸಿದ್ದರು. ಆತನ ಬಗ್ಗೆ ಯಾವುದೇ ಸುಳಿವು ಸಿಗದೇ ಇದ್ದಾಗ ಮನೆಮಂದಿಯಲ್ಲ ನಾಪತ್ತೆ ದೂರು ದಾಖಲಿಸಲು ನಿರಂತರ ಮೂರು ದಿನಗಳವರೆಗೆ ಪೊಲೀಸ್ ಠಾಣೆಗೆ ಅಲೆದಾಡಿದ್ದರು. ಜತೆಗೆ ತಮಗೆ ಆತನ ಬಗ್ಗೆ ಮಾಹಿತಿ ಇಲ್ಲ ಎಂದಿದ್ದ ಪೊಲೀಸರು ದೂರು ದಾಖಲಿಸಿಕೊಳ್ಳಲೂ ನಿರಾಕರಿಸಿದ್ದರು.
ನಾಲ್ಕನೇ ದಿನ ತಾಯಿ ಠಾಣೆಗೆ ತೆರಳಿದ್ದ ಸಂದರ್ಭದಲ್ಲಿ ಸಲ್ಮಾನ್‌ನನ್ನು ಠಾಣೆಯಲ್ಲಿ ಕೂಡಿ ಹಾಕಿರುವ ವಿಚಾರ ಆಕೆಯ ಗಮನಕ್ಕೆ ಬಂದಿದೆ. ಆ ವೇಳೆ ಆತನನ್ನು ಬಿಡುಗಡೆ ಮಾಡಬೇಕಾದರೆ 50,000 ರೂಪಾಯಿ ನೀಡಬೇಕೆಂದು ಪೊಲೀಸರು ಒತ್ತಡ ಹೇರಿದ್ದರೆಂದು ಸ್ವತಃ ಕುಟುಂಬಸ್ಥರು ಹೇಳಿದ್ದಾರೆ.
ಎರಡು-ಮೂರು ದಿನಗಳ ಬಳಿಕ ತಾಯಿ 10,000 ರೂಪಾಯಿ ಹೊಂದಿಸಿ ಆತನನ್ನು ಬಿಡಿಸಿಕೊಂಡು ಬಂದಿದ್ದರು. ಮನೆಗೆ ಬಂದ ಬಳಿಕ, ಪೊಲೀಸರು ಠಾಣೆಯಲ್ಲಿ ಅಮಾನವೀಯವಾಗಿ ಚಿತ್ರಹಿಂಸೆ ನೀಡಿರುವ ವಿಚಾರ ಬೆಳಕಿಗೆ ಬಂದಿದೆ.
ಆಸ್ಪತ್ರೆಗೆ ದಾಖಲಿಸಿದಾಗ ಪೊಲೀಸರ ಗಂಭೀರ ಹೊಡೆತದ ಪರಿಣಾಮ ಆತನ ಕೈಯಲ್ಲಿ ಸಂಪೂರ್ಣವಾಗಿ ಕೀವು ತುಂಬಿದ್ದು, ಕೂಡಲೇ ಕೈ ಕತ್ತರಿಸಬೇಕೆಂದು ವೈದ್ಯರು ಸೂಚಿಸಿದ್ದಾರೆ. ಪೊಲೀಸರ ಇಂತಹ ನಿಷ್ಕರುಣೆಯ ಕ್ರಮ ನಾಗರಿಕ ಸಮಾಜವನ್ನು ಆತಂಕಕ್ಕೆ ತಳ್ಳಿದೆ.
ಇನ್ನು ಯಾವುದೇ ದೂರು ದಾಖಲಿಸದೇ, ನಾಲ್ಕೈದು ದಿನ ಅಕ್ರಮ ಬಂಧನದಲ್ಲಿಟ್ಟು ಯುವಕನಿಗೆ ಬರ್ಬರವಾಗಿ ಥಳಿಸಲು ಕಾರಣಕರ್ತರಾದ ಸರ್ಕಲ್ ಇನ್ಸ್ ಪೆಕ್ಟರ್ ಸೋಮಶೇಖರ್, ಎಸ್ಸೈ ಮಂಜುನಾಥ್ ಅರನ್ನು ಕೂಡಲೇ ಅಮಾನತುಗೊಳಿಸಬೇಕು. ಅವರ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಸೈಯ್ಯದ್ ಜಾವೇದ್ ಒತ್ತಾಯಿಸಿದ್ದಾರೆ.
ಕುಟುಂಬದ ಆಧಾರಸ್ಥಂಭವಾಗಿದ್ದ ಸಲ್ಮಾನ್ ಪೊಲೀಸರ ಹೊಡೆತದಿಂದ ಕೈಕಳೆದುಕೊಂಡಿದ್ದು, ಸರಕಾರವು ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಧನ ಘೋಷಿಸಬೇಕು ಮತ್ತು ಆತನ ಚಿಕಿತ್ಸಾ ವೆಚ್ಚವನ್ನು ಸರಕಾರದ ವತಿಯಿಂದಲೇ ಭರಿಸಬೇಕೆಂದು ಒತ್ತಾಯಿಸಿದ್ದಾರೆ.