ಮದ್ದೂರು: ಮಂಡ್ಯದ ಮದ್ದೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತನ ತಲೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೊಡೆದಿದ್ದಕ್ಕೆ ರಾಜ್ಯ ಬಿಜೆಪಿ ಸರಣಿ ಟ್ವೀಟ್ ಮಾಡಿದೆ. ಟ್ವಿಟ್ಟರ್ನಲ್ಲಿ ಡಿಕೆಶಿಯವರೇ ನೀವು ರಾಜಕಾರಣಿಯೋ ಅಥವಾ ರೌಡಿಯೋ? ಎಂದು ಪ್ರಶ್ನಿಸಿದೆ.
ಸಾರ್ವಜನಿಕ ಜೀವನದಲ್ಲಿದ್ದುಕೊಂಡು ಒಬ್ಬ ವ್ಯಕ್ತಿಯ ಮೇಲೆ ಸಾರ್ವಜನಿಕವಾಗಿ, ಮಾಧ್ಯಮಗಳ ಎದುರು ಹಲ್ಲೆ ಮಾಡುವುದು ಶಿವಕುಮಾರ್ ಅವರ ಉಗ್ರ ಮನಸ್ಥಿತಿಯನ್ನು ತೋರಿಸುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ಈ ಹಿಂದೆ ಸೆಲ್ಫಿ ತೆಗೆಯಲು ಬಂದ ಕಾರ್ಯಕರ್ತನ ಮೇಲೆ ಡಿಕೆಶಿ ಹಲ್ಲೆ ಮಾಡಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ಗೆ ಗತಕಾಲದ ನೆನಪು ಕಾಡಿತೇ? ಅವರಿಗೆ ರೌಡಿ ಕೊತ್ವಾಲನೊಂದಿಗಿದ್ದ ಗತಕಾಲದ ನೆನಪು ಕಾಡಿತೇ? ಎಂದು ಪ್ರಶ್ನಿಸಿದ ರಾಜ್ಯ ಬಿಜೆಪಿ, ಒಂದು ರಾಷ್ಟ್ರೀಯ ಪಕ್ಷದ ರಾಜ್ಯ ಅಧ್ಯಕ್ಷನಾಗಿದ್ದುಕೊಂಡು ಸಾರ್ವಜನಿಕವಾಗಿ ಒಬ್ಬ ವ್ಯಕ್ತಿಯ ಮೇಲೆ ಈ ರೀತಿ ಹಲ್ಲೆ ಮಾಡುವುದು ಅಕ್ಷಮ್ಯ ಎಂದಿದೆ. ಅಲ್ಲದೆ ‘ರೌಡಿಡಿಕೆಶಿ’ ಟ್ಯಾಗ್ ಮಾಡಿ ವ್ಯಂಗ್ಯ ಮಾಡಿದೆ.
ಕಾರ್ಯಕರ್ತ ಹತ್ತಿರ ಬಂದ ಎಂಬ ಕಾರಣಕ್ಕೆ ಸಾರ್ವಜನಿಕವಾಗಿ ಹಲ್ಲೆ ಮಾಡುವ ಶಿವಕುಮಾರ್ ಅವರ ಬಳಿ ಜನಸಾಮಾನ್ಯರು ಹೋದರೆ ಗತಿಯೇನು ? ಕೆಪಿಸಿಸಿ ಅಧ್ಯಕ್ಷರೇ, ನೀವು ಹೊಡಿ, ಬಡಿ ರಾಜಕಾರಣದ ಬ್ರ್ಯಾಂಡ್ ಅಂಬಾಸಿಡರ್ ಆಗಲು ಹೊರಟಿದ್ದೀರಾ ಎಂದು ಪ್ರಶ್ನಿಸಿದೆ.
ಕೆಪಿಸಿಸಿ ಅಧ್ಯಕ್ಷರ ಹದ್ದು ಮೀರಿದ ವರ್ತನೆಗಳು ಇತ್ತೀಚೆಗೆ ಮಿತಿ ಮೀರುತ್ತಿದೆ. ʼನಾನು ಮಾತಾಡುವಾಗ ಮಧ್ಯ ಮಾತಾಡಿದ್ರೆ ಒದ್ದು ಹೊರಹಾಕುವೆʼ ಎಂದು ಇತ್ತೀಚೆಗೆ @DKShivakumar ಗದರಿಸಿದ್ದರು. ಸಾರ್ವಜನಿಕವಾಗಿ ಹೊಡೆಯುವುದು, ಒದೆಯೋದು, ಕಾರ್ಯಕರ್ತರ ಮೊಬೈಲನ್ನು ಕಿತ್ತೆಸೆಯುವುದು ಇದೆಲ್ಲ ರೌಡಿ ಲಕ್ಷಣ ಅಲ್ಲದೆ ಮತ್ತೇನು ಎಂದೂ ಪ್ರಶ್ನಿಸಿದೆ.
ಆಗಿದ್ದೇನು?
ಜಿ.ಮಾದೇಗೌಡರ ಆರೋಗ್ಯ ವಿಚಾರಿಸಲು ಡಿ.ಕೆ.ಶಿವಕುಮಾರ್ ಕೆ.ಎಂ.ದೊಡ್ಡಿಗೆ ಆಗಮಿಸಿದ್ದರು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಹಿಂಭಾಗ ಬರುತ್ತಿದ್ದರು. ಅಲ್ಲದೇ ಹಿಂಭಾಗದಿಂದ ಬಂದು ಶಿವಕುಮಾರ್ ಹೆಗಲ ಮೇಲೆ ಕೈ ಹಾಕಿದ ಆರೋಪ ಕೇಳಿಬಂದಿದ್ದು, ಕಾರ್ಯಕರ್ತನ ತಲೆ ಮೇಲೆ ಪಟಾರ್ ಅಂತ ಬಾರಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಕೊಟ್ಟ ಏಟಿಗೆ ಕಾರ್ಯಕರ್ತರು ತಬ್ಬಿಬ್ಬಾಗಿದ್ದಾರೆ.