ಪಿರಿಯಾಪಟ್ಟಣ: ಶೀಘ್ರದಲ್ಲಿ 115 ಕೋಟಿ ರೂ. ವೆಚ್ಚದಲ್ಲಿ ಪುರಸಭಾ ವ್ಯಾಪ್ತಿಯ 23 ವಾರ್ಡ್‌ಗಳಿಗೂ ಕಾವೇರಿ ನೀರು ಸರಬಾರಜು ಮಾಡುವ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಶಾಸಕ ಕೆ ಮಹದೇವ್ ತಿಳಿಸಿದ್ದಾರೆ.
ಪಟ್ಟಣದ ಪುರಸಭಾ ವ್ಯಾಪ್ತಿಯ ಮೇದರ್ ಬ್ಲಾಕ್ ನಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಶನಿವಾರ 25 ಲಕ್ಷ ರೂ. ವೆಚ್ಚದಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಮೀಸಲಾತಿ ಸಮಸ್ಯೆಯಿಂದ ಇಲ್ಲಿನ ಸದಸ್ಯರಿಗೆ 2 ವರ್ಷಗಳ ನಂತರ ಅಧಿಕಾರ ಸಿಕ್ಕಿದೆ ಹಾಗಾಗಿ ಪಟ್ಟಣದ ಅಭಿವೃದ್ದಿ ಕುಂಟಿತವಾಗಿದೆ. ನಾನು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ 2 ಕೋಟಿ ರೂ. ಅನುದಾನವನ್ನು ತಂದು ಪುರಸಭಾ ವ್ಯಾಪ್ತಿಯ ವಾರ್ಡ್ ಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಶ್ರಮಿಸಿದ್ದೇನೆ ಎಂದು ಹೇಳಿದರು.
ಇಲ್ಲಿನ ವಾರ್ಡ್ ಗಳ ಪೂರ್ಣಪ್ರಮಾಣದ ಅಭಿವೃದ್ದಿ ಸಾಧ್ಯವಾಗಿಲ್ಲ. ಪಟ್ಟಣದ ಅಭಿವೃದ್ಧಿಗೆ 20 ಕೋಟಿ ರೂ. ಅನುದಾನ ನೀಡುವಂತೆ ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಇಲಾಖೆಗಳ ಮಂತ್ರಿಗಳಲ್ಲಿ ಮನವಿ ಮಾಡಿದ್ದೇನೆ. ಈ ಅನುದಾನ ಬಂದರೆ ಎಲ್ಲ ವಾರ್ಡ್ ಗಳಿಗೂ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು ಎಂದರು.
ಚುನಾವಣಾ ಪೂರ್ವದಲ್ಲಿ ನಾನು 2 ಸಾವಿರ ನಿವೇಶನಗಳನ್ನು ನೀಡುವ ಭರವಸೆ ನೀಡಿದ್ದ ಕಾರಣ ಜನತೆ ನಮ್ಮ ಪಕ್ಷದ 14 ಸದಸ್ಯರನ್ನು ಆಯ್ಕೆ ಮಾಡಿ ಕಳುಹಿಸಿದ್ದಾರೆ. ಆದ್ದರಿಂದ ಜನತೆಗೆ ನೀಡಿದ ಭರವಸೆಯನ್ನು ಉಳಿಸಿಕೊಳ್ಳಬೇಕಾಗಿದೆ.
ಪಟ್ಟಣದ ಬೆಟ್ಟದಪುರ ವೃತ್ತ, ಉಪ್ಪಾರಗೇರಿ ಗೇಟ್ ನಿಂದ ಸಾರ್ವಜನಿಕ ಆಸ್ಪತ್ರೆ, ತಾಲೂಕು ಪಂಚಾಯಿತಿ ಕಚೇರಿ ಹಾಗೂ ತಾತನಹಳ್ಳಿ ಗೇಟ್ ಸೇರಿದಂತೆ ಕೆಲವು ಆಯ್ದ ಸ್ಥಳಗಳಿಗೆ ಸಿಸಿ ಕ್ಯಾಮರ ಹಾಗೂ ಸಿಗ್ನಲ್ ಲೈಟ್ ಅಳವಡಿಸಲು ತೀರ್ಮಾನಿಸಿದ್ದು, ಮುಂದಿನ 15 ದಿನಗಳಲ್ಲಿ ಈ ಕೆಲಸ ಸಕಾರವಾಗಲಿದೆ ಎಂದರು.
ಶೀಘ್ರದಲ್ಲಿ 23 ವಾರ್ಡ್ ಗಳಿಗೂ ಕಾವೇರಿ ನೀರು: ನಾನು ಪಟ್ಟಣ ಪಂಚಾಯಿತಿ ಅಧ್ಯಕ್ಷನಾಗಿದ್ದಾಗ ಗಿರಗೂರು ರಾಣಿಗೇಟ್ ಬಳಿ ಕಾವೇರಿ ನೀರನ್ನು ಪಟ್ಟಣಕ್ಕೆ ಒದಗಿಸಲು ಯೋಜನೆಯನ್ನು ರೂಪಿಸಿದ್ದೆ ಅದು ಕೇವಲ 2-3 ವಾರ್ಡ್ ಗಳಿಗೆ ಮಾತ್ರ ಸೀಮಿತವಾಗಿ ಉಳಿಯಿತು.
ನನ್ನ ನಂತರ ಬಂದ ಪಟ್ಟಣ ಪಂಚಾಯಿತಿ ಅಧ್ಯಕ್ಷರು ಮತ್ತು ಅಧಿಕಾರಿಗಳು ನಿರ್ಲಕ್ಷ್ಯ ವಹಿಸದ ಕಾರಣ ಯೋಜನೆ ಪೂರ್ಣಗೊಳ್ಳಲು ಸಾಧ್ಯವಾಗಿಲ್ಲ. ಈಗ ನಾನೇ ಈ ಯೋಜನೆಯನ್ನು ಕೈಗೆತ್ತುಕೊಂಡಿದ್ದು, ರೂ.115 ಕೋಟಿ ವೆಚ್ಚದಲ್ಲಿ 23 ವಾರ್ಡ್ ಗಳಿಗೂ ಕಾವೇರಿ ನೀರನ್ನು ಕಲ್ಪಿಸಲು ಯೋಜನೆ ರೂಪಿಸಲಾಗಿದೆ ಎಂದರು.
ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ.ಎನ್.ರವಿ, ಪುರಸಭಾ ಅಧ್ಯಕ್ಷ ಮಂಜುನಾಥ ಸಿಂಗ್, ಆರೋಗ್ಯ ನಿರೀಕ್ಷಕ ಪ್ರದೀಪ್, ಸದಸ್ಯರಾದ ಪಿ.ಸಿ.ಕೃಷ್ಣ, ಪಿ.ವಿ.ರವಿ, ಪ್ರಕಾಶ್ ಸಿಂಗ್, ಭಾರತಿ, ಸ್ಥಾಯಿ ಸಮಿತಿ ಅಧ್ಯಕ್ಷ ವಿನೋದ್, ಮುಖಂಡರಾದ ಅಣ್ಣಯ್ಯ ಶೆಟ್ಟಿ, ಪಿ.ಕೆ.ಕುಮಾರ್, ಚಂದ್ರು, ಪೆಪ್ಸಿ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.