ಬನ್ನೂರು: ಪ್ರತಿ ವರ್ಷದಂತೆ ಈ ವರ್ಷವು (ಅ.8) ಶುಕ್ರವಾರ ತಾಯಿ ಚಾಮುಂಡೇಶ್ವರಿ ಹಬ್ಬ ಬೀಡನಹಳ್ಳಿ ಗ್ರಾಮದಲ್ಲಿ ವಿಜೃಂಭಣೆಯಿಂದ ನಡೆಯಿತು.
ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕಿನ ಬೀಡನಹಳ್ಳಿ ಗ್ರಾಮದಲ್ಲಿ ತಲಾತಲಾಂತರದಿಂದಲೂ ಹಬ್ಬ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಅದರಂತೆ ಈ ವರ್ಷ ಹಬ್ಬ ಆಚರಣೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.
ಹಬ್ಬದ ಅಂಗವಾಗಿ ಗ್ರಾಮದ ಹೆಂಗಳೆಯರು ತಂಬಿಟ್ಟಿನ ಆರತಿಯೊಂದಿಗೆ ತಾಯಿ ಚಾಮುಂಡೇಶ್ವರಿಗೆ ಪೂಜೆ ನೆರವೇರಿಸಿದರು. ಈ ವೇಳೆ ಬಂಧು ಬಳಗ, ಸ್ನೇಹಿತರು ಸೇರಿದಂತೆ ಆಪ್ತರನ್ನು ಹಬ್ಬಕ್ಕೆ ಆಹ್ವಾನಿಸಿ ಹಬ್ಬದಡಿಗೆ ಮಾಡಿ ಬಡಿಸಿದರು.
ಇಂದು ಅ.8ರಂದು ಮಧ್ಯಾಹ್ನನದ ನಂತರ ಗ್ರಾಮದ ಹೆಂಗಳೆಯರು ತಂಬಿಟ್ಟಿನಾರತಿ ಜತೆಗೆ ಹಣ್ಣು ಕಾಯಿ ಧೂಪ, ಸಮೇತ ಮಾರಮ್ಮ, ಮುತ್ತತ್ತಿರಾಯನ ಪೂಜೆ ಹೊತ್ತು ಬೀಡನಹಳ್ಳಿ ಗ್ರಾಮದ ರಾಜ ಬೀದಿಗಳ ಮೂಲಕ ಮೆರವಣಿಗೆ ಮಾಡಿ ತಾಯಿ ಚಾಮುಂಡೇಶ್ವರಿ ದೇವಾಲಯಕ್ಕೆ ಆಗಮಿಸಿ ಪೂಜೆ ನೆರವೇರಿಸಲಾಗುವುದು.
ಇದಕ್ಕೂ ಮುನ್ನಾ ಬನ್ನೂರು ಹೆಗ್ಗೆರೆಯಿಂದ ಮತ್ತೆ ಹೂ ಹೊಂಬಾಳೆಯಾಗಿ ಬರುವ ಬೀಡನಹಳ್ಳಿ ಮಾರಮ್ಮ ಮತ್ತು ಮುತ್ತತ್ತಿರಾಯನ ಪೂಜೆಗಳನ್ನು ಹೊತ್ತ ದೇವರ ಗುಡ್ಡಪ್ಪಂದಿರು ಪೂಜೆಯೊಂದಿಗೆ ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕಿ ನಂತರ ತೀರ್ಥ ಪ್ರೊಕ್ಷಣೆ ಮಾಡಿದ ಬಳಿಕ ದೇವಿಗೆ ಪೂಜೆ ನೆರವೇರಿಸಲಾಯಿತು.
ಪ್ರತಿ ವರ್ಷ ಗ್ರಾಮದ ಯುವಕರು ನಾಡಿನ ದೇವತೆ ಹಬ್ಬದಂದು ಮನರಂಜನೆ ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತಿದ್ದರು. ಆದರೆ, ಈ ಬಾರಿ ಕೊರೊನಾ ಮಹಾಮಾರಿಯಿಂದ ಯಾವುದೇ ನಾಟಕ, ಮನರಂಜನೆ ಕಾರ್ಯಕ್ರಮವನ್ನು ಆಯೋಜನೆ ಮಾಡಿಲ್ಲ.
ಇನ್ನು ಗ್ರಾಮವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದ್ದು, ದೇವಸ್ಥಾನ ಮತ್ತು ರಾಜ ಬೀದಿಗಳಲ್ಲಿ ವಿದ್ಯುತ್ ದೀಪಗಳು ಜಗಮಗಿಸುತ್ತಿವೆ.