ವಿಜಯಪಥ ಸಮಗ್ರ ಸುದ್ದಿ
ಮೈಸೂರು: ಗೆದ್ದಲು ಹುಳಿವಿನಂತೆ ದುಡಿದು ಕಾಂಗ್ರೆಸ್ ಎಂಬ ಹುತ್ತ ಕಟ್ಟಿದ್ದೇವೆ. ಈಗ ಆ ಹುತ್ತಕ್ಕೆ ವಿಷ ಸರ್ಪಗಳು ಬಂದು ಸೇರಿಕೊಂಡು ಪಕ್ಷವನ್ನು ನಾಶ ಮಾಡುತ್ತಿವೆ ಎಂದು ಕೆಪಿಸಿಸಿ ಸದಸ್ಯರೂ ಆದ ಕೆ.ಆರ್.ಪೇಟೆ ಕಾಂಗ್ರೆಸ್ ಉಸ್ತುವಾರಿ ಪಿ.ರಾಜು ಬೇಸರ ವ್ಯಕ್ತಪಡಿಸಿದರು.
ಕಾಂಗ್ರೆಸ್ ಅಲ್ಪ ಸಂಖ್ಯಾತರ ವಿಭಾಗ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಜೀಜ್ ಸೇಠ್ ಬ್ಲಾಕ್ ಅಧ್ಯಕ್ಷ ಅಬ್ದುಲ್ ಖಾದರ್ ಶಾಹಿದ್, ನಗರ ಡಿಸಿಸಿ ಉಪಾಧ್ಯಕ್ಷ ಅನ್ವರ್ ಪಾಷಾ, ತಮ್ಮನ್ನು ಅಮಾನತು ಗೊಳಿಸಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. 28 ವರ್ಷದಿಂದ ಖಾಸಗಿ ಜೀವನವನ್ನೂ ಮರೆತು ಕಾಂಗ್ರೆಸ್ ಕಟ್ಟಿದ್ದಕ್ಕೆ ಅಮಾನತಿನ ಬಹುಮಾನ ಸಿಕ್ಕಿದೆ. ಇದು ನಮಗೆ ಸಿಗಬೇಕಾದ ಬಹುಮಾನವೇ ಎಂದು ನೊಂದು ನುಡಿದರು.
ಮೈಸೂರು ಮೇಯರ್ ಚುನಾವಣೆ ವೇಳೆ ಸಿದ್ದರಾಮಯ್ಯ ಅವರ ವಿರುದ್ಧ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಮನ್ನು ಅಮಾನತುಗೊಳಿಸಲಾಗಿದೆ. ತಪ್ಪು ಮಾಡಿದವರಿಗೆ ಶಿಕ್ಷೆ ನೀಡುವ ಬದಲು ನಮ್ಮನ್ನು ಗುರಿಯಾಗಿಸಿಕೊಂಡು ಅಮಾನತು ಮಾಡಿದ್ದಾರೆ ಎಂದು ದೂರಿದರು.
ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ ಅವರ ಮನೆಯಲ್ಲಿಯೇ ಮೂರು ಪಕ್ಷಗಳಿವೆ. ಇಂತವರು ಯಾವ ನೈತಿಕತೆಯ ಮೇಲೆ ಅಮಾನತುಗೊಳಿಸಿದರು? ಅಹಿಂದ ಎಂದವರು ಯಾವ ನಾಯಕರನ್ನು ಬೆಳೆಯಲು ಬಿಡಲಿಲ್ಲ ಎಂದು ಕಿಡಿಕಾರಿದರು.
141 ಬೂತ್ ಅಧ್ಯಕ್ಷರ ಸಾಮೂಹಿಕ ರಾಜಿನಾಮೆ?
ನಗರ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ನಿಸಾರ್ ಅಹ್ಮದ್ ಮಾತನಾಡಿ, ಮಹಾಪೌರ ಚುನಾವಣೆಯಲ್ಲಿ ವರಿಷ್ಠರ ಸೂಚನೆಯಂತೆ ನಡೆದುಕೊಂಡಿದ್ದರೂ ಅವಮಾನತುಗೊಳಿಸಿರುವುದು ಖಂಡನೀಯ. ಯಾವುದೇ ತಪ್ಪ ಮಾಡದ ಅಬ್ದುಲ್ ಖಾದರ್ ಶಾಹಿದ್ ಅಮಾನತು ಖಂಡಿಸಿ ಅಜೀಜ್ ಸೇಠ್ ಬ್ಲಾಕ್‌ನ 9 ವಾರ್ಡ್ ಅಧ್ಯಕ್ಷರು ಹಾಗೂ 141 ಬೂತ್ ಅಧ್ಯಕ್ಷರು ಸಾಮೂಹಿಕ ರಾಜೀನಾಮೆ ನೀಡಲು ನಿರ್ಧಾರಿಸಿದ್ದೇವೆ ಎಂದು ತಿಳಿಸಿದರು.
ಡಿಸಿಸಿ ಸದಸ್ಯ ರಹಮಾನ್ ಖಾನ್ ಮಾತನಾಡಿ, ಈಗ ಅಮಾನತುಗೊಳಿಸಿರುವವರು ಯಾರೂ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದವರಲ್ಲ. ತನ್ವೀರ್ ಸೇಠ್ ಮನೆ ಮುಂದೆ ನಡೆದ ಪ್ರತಿಭಟನೆಯನ್ನು ತಿಳಿಗೊಳಿಸಿದರು ಅಷ್ಟೇ. ಆದರೆ ನಿಜವಾಗಿಯೂ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದವರ ವಿರುದ್ಧ ಇನ್ನೂ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.
ಅಜೀಜ್ ಸೇಠ್ ಬ್ಲಾಗ್ ಅಧ್ಯಕ್ಷ ರಸೂಲ್, ಉಪಾಧ್ಯಕ್ಷ ಸೈಯದ್ ಎಕ್ಬಾಲ್, ಕೆಪಿಸಿಸಿ ಸದಸ್ಯ ರಾಜು ಇದ್ದರು.