ವಿಜಯಪಥ ಸಮಗ್ರ ಸುದ್ದಿ
ಮೈಸೂರು: ಮಹಾನಗರ ಪಾಲಿಕೆ ವತಿಯಿಂದ ಜೂ.16ರಂದು 18 ವರ್ಷ ಮೇಲ್ಪಟ್ಟ ವಿಶೇಷಚೇತನರಿಗೆ ಕೋವಿಡ್-19 ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು.
ಬೀದಿ ಬದಿ ವ್ಯಾಪಾರಿಗಳಿಗೆ ಇಂದಿನಿಂದ ಜೂನ್ 20ರ ತನಕ ಬೆಳಗ್ಗೆ 10 ರಿಂದ ಸಂಜೆ 4ರವರೆಗೆ ಪುರಭವನದಲ್ಲಿ ಲಸಿಕೆ ನೀಡಲು ನಿರ್ಧರಿಸಲಾಗಿದ್ದು ನೋಂದಾಯಿತ ಹಾಗೂ ನೋಂದಾಯಿಸಲ್ಪಡದ ಬೀದಿ ಬದಿ ವ್ಯಾಪರಿಗಳಿಗೂ ಲಸಿಕೆ ನೀಡಲಾಗುವುದು ಅರ್ಹರು ಆಧಾರ್ ಕಾರ್ಡ್ ಹಾಗೂ ವ್ಯಾಪಾರದ ಗುರುತಿನ ಚೀಟಿ ತೆಗೆದುಕೊಂಡು ಬರಬೇಕು ಎಂದು ಮಹಾನಗರ ಪಾಲಿಕೆ ತಿಳಿಸಿದೆ.
ವಿಶೇಷ ಚೇತನರಿಗೆ ಜೂನ್ 17 ರಿಂದ 19 ರವರೆಗೆ ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ತಿಲಕನಗರದ ಅಂಧಮಕ್ಕಳ ಪಾಠಶಾಲೆಯಲ್ಲಿ ಲಸಿಕೆ ನೀಡಲು ನಿರ್ಧರಿಸಲಾಗಿದೆ. ವಿಶೇಷ ಚೇತನರು ಆಧಾರ್ ಕಾರ್ಡ್ ಹಾಗೂ ಸರ್ಕಾರದ ಪ್ರಮಾಣಪತ್ರವನ್ನು ಕಡ್ಡಾಯವಾಗಿ ತರಬೇಕಿದ್ದು, ವಾರ್ಡ್ವಾರು ಉಚಿತ ವಾಹನದ ಸೌಲಭ್ಯ ಸಹಾ ಮಾಡಲಾಗಿದೆ ಎಂದು ಪಾಲಿಕೆ ನೀಡಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನಗರ ವ್ಯಾಪ್ತಿಯ ವಿಶೇಷಚೇತನರು ಇಲಾಖೆಯಿಂದ ನೀಡಿರುವ ಗುರುತಿನ ಚೀಟಿ, ಆಧಾರ್ ಕಾರ್ಡ್‌ನೊಂದಿಗೆ ನಿಗದಿತ ಸ್ಥಳಕ್ಕೆ ಹಾಜರಾಗಿ ಲಸಿಕೆ ಪಡೆಯುವಂತೆ ಸಲಹೆ ನೀಡಿದೆ. ಈ ಮೂಲಕ ಸ್ವಚ್ಛ ನಗರಿ, ಸಾಂಸ್ಕೃತಿಕ ನಗರಿ ಎಂಬ ಹಿರಿಮೆಗಳಿಗೆ ಪಾತ್ರವಾಗಿರುವ ಮೈಸೂರು ಇದೀಗ ಕೊರೊನಾ ಲಸಿಕೆಯ ವಿಚಾರದಲ್ಲೂ ನಂ.1 ಆಗಿ ಹೊರಹೊಮ್ಮುವ ಮೂಲಕ ಇತರೆ ಜಿಲ್ಲೆಗಳಿಗೆ ಮಾದರಿ ಎನ್ನಿಸಿಕೊಂಡಿದೆ.
ರಾಜ್ಯದಲ್ಲಿ ಇಲ್ಲಿಯ ತನಕ ಅತಿ ಹೆಚ್ಚು ಲಸಿಕೆ ನೀಡಿದ ಜಿಲ್ಲೆ ಎಂಬ ಕೀರ್ತಿ ಮೈಲೂಕಿನಲ್ಲಿ ಅತಿ ವೇಗವಾಗಿ ಲಸಿಕೆ ವಿತರಣೆ ಆಗುತ್ತಿದೆ. ಜಿಲ್ಲೆಯಲ್ಲಿರುವ 24ಲಕ್ಷ ಜನರಿಗೂ ಆದಷ್ಟು ಬೇಗ ಕೊರೊನಾ ಲಸಿಕೆ ತಲುಪಿಸಬೇಕು ಎಂಬ ಯೋಜನೆಯನ್ನು ಜಿಲ್ಲಾಡಳಿತ ರೂಪಿಸಿದ್ದು, ಜನರು ಕೂಡಾ ಅದಕ್ಕೆ ಪೂರಕವಾಗಿ ಸ್ಪಂದಿಸುತ್ತಿರುವುದು ಮತ್ತಷ್ಟು ಬಲ ನೀಡಿದೆ.
ಲಸಿಕೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿರುವ ಕಾರಣ ಕೊರೊನಾ ಸೋಂಕಿತರ ಪ್ರಮಾಣವೂ ಕಡಿಮೆಯಾಗಿದ್ದು, ಹೊಸದಾಗಿ ದಾಖಲಾಗುವ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಇದೀಗ ಬೀದಿಬದಿ ವ್ಯಾಪಾರಿಗಳು ಮತ್ತು ವಿಶೇಷ ಚೇತನರಿಗೆ ಕೊರೊನಾ ಲಸಿಕೆ ತಲುಪಿಸಲು ಇಂದಿನಿಂದ ಮೈಸೂರಿನಲ್ಲಿ ಲಸಿಕಾ ಅಭಿಯಾನ ಆರಂಭವಾಗುತ್ತಿದ್ದು, ಮೈಸೂರು ಮಹಾನಗರ ಪಾಲಿಕೆ ಅಭಿಯಾನ ಸರಾಗವಾಗಿ ಸಾಗಲು ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿದೆ.