ವಿಜಯಪಥ ಸಮಗ್ರ ಸುದ್ದಿ
ಚಾಮರಾಜನಗರ: ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಅವರ ವರ್ಗಾವಣೆ ಆಗಿಲ್ಲ ಎಂದು ತಿಳಿದು ಬಂದಿದೆ. ಇದಕ್ಕೆ ಪುಷ್ಟಿ ನೀಡುವಂತೆ ಐಎಎಸ್ ಅಧಿಕಾರಿ ಡಾ.ಬಿ.ಸಿ.ಸತೀಶ್ ಅವರು ಚಾಮರಾಜನಗರದ ನೂತನ ಡಿಸಿ ಎಂದು ಹೇಲಲಾಗಿತ್ತು. ಆದರೆ ಈಗ ನನಗೆ ಯಾವುದೇ ಆದೇಶ ಬಂದಿಲ್ಲ ಎಂದು ರವಿ ತಿಳಿಸಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಜಲಾನಯನ ಅಭಿವೃದ್ಧಿ ಇಲಾಖೆ ಆಯುಕ್ತ ಸತೀಶ್ ನನಗೆ ಚಾಮರಾನಗರ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದ್ದ ಆದೇಶವನ್ನು ರದ್ದುಗೊಳಿಸಲಾಗಿದೆ. ಕೆಲ ದಿನಗಳ ಹಿಂದೆ ಪಶ್ಚಿಮ ಬಂಗಾಳ ಚುನಾವಣಾ ವೀಕ್ಷಕನಾಗಿ ನಿಯೋಜಿಸಲಾಗಿತ್ತು. ಸದ್ಯ ಯಾವುದೇ ಹುದ್ದೆಗೆ ನಿಯೋಜಿಸಿಲ್ಲ ಎಂದು ಹೇಳಿದ್ದಾರೆ.
ಬುಧವಾರ ರಾತ್ರಿ ವರ್ಗಾವಣೆ ಆಗಿತ್ತು. ಆದರೆ ಗುರುವಾರ ಬೆಳಗ್ಗೆ ಬದಲಾಗಿದೆ. ನಾನು ಚಾಮರಾಜನಗರಕ್ಕೆ ಬರ್ತಾ ಇಲ್ಲ ಎಂದು ಡಾ.ಬಿ.ಸಿ. ಸತೀಶ್ ಸ್ಪಷ್ಟಪಡಿಸಿದ್ದಾರೆ. ಇನ್ನು ಈ ಕುರಿತು ಚಾಮರಾಜನಗರದಲ್ಲಿ ಡಿಸಿ ಡಾ.ಎಂ.ಆರ್.ರವಿ, ನಾನು ಇಲ್ಲೇ ಇದ್ದೀನಿ. ವರ್ಗಾವಣೆ ಆಗಿಲ್ಲ ಎಂದು ಮಾಧ್ಯಮಗಳಿಗೆ ಕೋಪದಲ್ಲೇ ಪ್ರತಿಕ್ರಿಯೆ ನೀಡಿದ್ದಾರೆ.
ಜಿಲ್ಲಾಧಿಕಾರಿ ರವಿ ಅವರಿಗೆ ಬುಧವಾರ ರಾತ್ರಿ ವರ್ಗಾವಣೆ ಆಗಿತ್ತು. ಗುರುವಾರ ಬೆಳಿಗ್ಗೆ ಬದಲಾಗಿದೆ ಎಂದು ತಿಳಿದು ಬಂದಿದ್ದು, ರವಿ ಅವರ ವರ್ಗಾವಣೆ ಎಂಬ ಊಹಾಪೋಹಕ್ಕೆ ತೆರೆಬಿದ್ದಿದೆ.
ಚಾಮರಾಜನಗರದಲ್ಲಿ ಉಂಟಾಗಿದ್ದ ಆಮ್ಲಜನಕ ದುರಂತದಲ್ಲಿ ಹೈಕೋರ್ಟ್ ನೇಮಿಸಿದ್ದ ಸತ್ಯಶೋಧನೆ ಸಮಿತಿಯು ದುರ್ಘಟನೆಗೆ ಜಿಲ್ಲಾಧಿಕಾರಿ ವೈಫಲ್ಯವೇ ಕಾರಣ ಎಂದು ಹೇಳಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಜಿಲ್ಲಾಧಿಕಾರಿ ರವಿ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಿದೆ ಎಂಬ ನಿರೀಕ್ಷೆ ಇತ್ತು. ಈ ಕುರಿತು ಗುರುವಾರ ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಗುಂಡ್ಲುಪೇಟೆ ಬಿಜೆಪಿ ಶಾಸಕ ಮತ್ತು ರಾಜ್ಯ ಅರಣ್ಯ ಕೈಗಾರಿಕೆ ನಿಗಮದ ಅಧ್ಯಕ್ಷ ಸಿ.ಎಸ್.ನಿರಂಜನ್ ಕುಮಾರ್, ಜಿಲ್ಲಾಧಿಕಾರಿ ಡಾ.ರವಿ ಅವರ ವರ್ಗಾವಣೆ ಆಗಿದೆ ಎಂದು ತಿಳಿಸಿದ್ದರು.