ಮಳವಳ್ಳಿ: ನಮ್ಮ ಪಕ್ಷದ ಅಭ್ಯರ್ಥಿ ದಿನೇಶ್ ಗೂಳಿಗೌಡ ಅವರನ್ನು ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಗೆಲುವಿನ ಪರ್ವ ಆರಂಭವಾಗಬೇಕು ಎಂದು ಹೇಳುವ ಮೂಲಕ ಪಕ್ಷದ ಅಭ್ಯರ್ಥಿ ದಿನೇಶ್ ಗೂಳಿಗೌಡರ ಪರವಾಗಿ ಮಾಜಿ ಸಚಿವ ನರೇಂದ್ರಸ್ವಾಮಿ ಮತಯಾಚಿಸಿದರು.
ಶನಿವಾರ ಮಳವಳ್ಳಿಯಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದರು.
ಮಂಡ್ಯದಲ್ಲಿ ಕಾಂಗ್ರೆಸ್ ಪಕ್ಷ ಎದ್ದು ನಿಲ್ಲಬೇಕಾಗಿದೆ. ಕಾರಣ ಮಂಡ್ಯದಲ್ಲಿ ಇಂದು ಕಳ್ಳರ, ಸುಳ್ಳರ ಸಾಮ್ರಾಜ್ಯ ಸ್ಥಾಪನೆಯಾಗಿದೆ. ಇಂದು ನೀವು ಮಾತನಾಡಬೇಕು. ನಮಗೆ ಸುಳ್ಳು ಹೇಳುವವರು ಬೇಕಾಗಿಲ್ಲ. ಅವರ ಹಾಗೆ ನಾವು ಇಂದ್ರಲೋಕ, ಚಂದ್ರಲೋಕ ತೋರಿಸುತ್ತೇವೆ ಎಂದು ಸುಳ್ಳು ಹೇಳಲ್ಲ ಎಂದರು.
ಕಳೆದ ಬಾರಿ ಜೆಡಿಎಸ್ ನಿಂದ ಗೆದ್ದಂತಹ ಅಪ್ಪಾಜಿಗೌಡ ಅವರನ್ನು ಪ್ರಶ್ನಿಸಬೇಕಾಗಿದೆ. ನಮ್ಮ ಜಿಲ್ಲೆಗೆ ನಿಮ್ಮ ಕೊಡುಗೆ ಏನಿದೆ ಅಂತ. ಜೆಡಿಎಸ್ ಅಧಿಕಾರದಲ್ಲಿದ್ದಾಗ ಸಕ್ಕರೆ ಕಾರ್ಖಾನೆ ಸ್ಥಗಿತಗೊಂಡಿತು. ಹಾಲಿಗೆ ನೀರು ಬೆರಸಿ ರೈತರಿಗೆ ಮೋಸ ಮಾಡಲಾಯಿತು. ಇಂದು ಇದನ್ನೆಲ್ಲ ಪ್ರಶ್ನಿಸಬೇಕಾಗಿದೆ ಎಂದರು.
ಎನ್.ಚಲುವರಾಯಸ್ವಾಮಿ ಮಾತನಾಡಿ, ಪಂಚಾಯತ್ ರಾಜ್ ವ್ಯವಸ್ಥೆ, ಅಧಿಕಾರ ವಿಕೇಂದ್ರೀಕರಣ, ಮಹಿಳೆಯರಿಗೆ ಮೀಸಲಾತಿ ವ್ಯವಸ್ಥೆಯೇನಾದರೂ ಇಂದಿಗೂ ಇದೆ ಎಂದರೆ ಕಾರಣ ಅದು ಕಾಂಗ್ರೆಸ್ ಪಕ್ಷ ಎಂದು ಹೇಳಿದರು.
ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಪಕ್ಷದ ನಾಯಕರಾದ ಜವಹರ್ ಲಾಲ್ ನೆಹರು, ಇಂದಿರಾ ಗಾಂಧಿ ರಾಜೀವ್ ಗಾಂಧಿ, ದೇವರಾಜ ಅರಸು, ಸಿದ್ದರಾಮಯ್ಯ ಅವರಂತಹ ನಾಯಕರು ತೆಗೆದುಕೊಂಡ ತೀರ್ಮಾನದಿಂದ ಇಂತಹ ಸೌಲಭ್ಯಗಳು ನಮಗೆ ಸಿಗುತ್ತಿವೆ ಎಂದು ಹೇಳಿದರು.
ಇಂದು ಮತ ಹಾಕಿದವರಿಗೆ ಕನಿಷ್ಠ ಪ್ರಮಾಣದಲ್ಲಿ ಕೆಲಸ ಮಾಡಿ ನಿಮ್ಮ ಗೌರವ ಉಳಿಸಿಕೊಳ್ಳುತ್ತಿರುವುದು ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ತಂದಂತಹ ನರೇಗ ಯೋಜನೆಯಿಂದ. ಇಂದು ಮೋದಿ ಅವರು ಬಂದ ತಕ್ಷಣ ನರೇಗಾವನ್ನು ವಜಾ ಮಾಡಲು ಹೊರಟರು. ಆದರೆ ಹೋರಟದ ಫಲವಾಗಿ ನರೇಗಾವನ್ನು ವಜಾ ಮಾಡದೆ ಅದರ ಶಕ್ತಿಯನ್ನು ಕುಂದಿಸಿದ್ದಾರೆ ಎಂದರು.
ದೇಶಕ್ಕೆ ಇಂತಹ ಒಂದು ಆಡಳಿತವನ್ನು ಕೊಡುತ್ತಿರುವ ಬಿಜೆಪಿ ಸರ್ಕಾರಕ್ಕೆ ಅಣ್ಣ ತಮ್ಮನಂತೆ ವರ್ತಿಸುತ್ತಿರುವ ಜನತಾದಳದ ಅಭ್ಯರ್ಥಿಗಳಿಗೆ ಸಹಕಾರ ಕೊಡಬೇಕೆ ಅಥವಾ ಬೇಡವೇ ಎಂಬ ತೀರ್ಮಾನವನ್ನು ನೀವು ತೆಗೆದುಕೊಳ್ಳಬೇಕು ಎಂದು ಹೇಳಿದರು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಅವರು ತಂದಷ್ಟು ಯೋಜನೆಗಳನ್ನು ಯಾರು ತಂದಿಲ್ಲ. ಇಂದು ಅನ್ನಭಾಗ್ಯ, ಕ್ಷೀರಾಭಾಗ್ಯದ ಜೊತೆಗೆ ಅನೇಕ ಯೋಜನೆಗಳ ಸುರಿಮಳೆ ಕಾಂಗ್ರೆಸ್ ನೀಡಿರುವ ಕೊಡುಗೆಯಾಗಿದೆ ಎಂದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂದು ಅನ್ನಭಾಗ್ಯ ಯೋಜನೆಯಡಿ ಅಕ್ಕಿಯನ್ನು ನೀಡುತ್ತಿದ್ದರು. ಇಂದು ಅದರಲ್ಲಿ ಬಿಜೆಪಿ 2ಕೆ.ಜಿ ಕಡಿಮೆ ಕೊಡುತ್ತಿದೆ. ಇಂದು ಮನ್ ಮುಲ್ ನಿಂದ ಹಾಲಿನ ದರವನ್ನು 2ರೂ. ಕಡಿಮೆ ಮಾಡಿದ್ದಾರೆ. ಅಂದು ಸಿದ್ದರಾಮಯ್ಯ ಅವರು 5ರೂ. ಕೊಡದಿದ್ದರೆ ಇಂದು 10 ರೂ. ಕಡಿಮೆ ಮಾಡಬೇಕಾಗಿತ್ತು ಎಂದು ಹೇಳಿದರು.
ರಾಷ್ಟ್ರದಲ್ಲಿ ಬಿಜೆಪಿ ಸರ್ಕಾರದಿಂದ ಪೆಟ್ರೋಲ್, ಡಿಸೇಲ್, ಗ್ಯಾಸ್ ದರ ಹೆಚ್ಚಳವಾಗಿದೆ. ಉಪಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಗೆದ್ದನಂತರ ಪೆಟ್ರೋಲ್ ಡಿಸೇಲ್ ದರ ಇಳಿಸಿದ್ದಾರೆ. ರೈತರ ಹೋರಾಟದ ಫಲವಾಗಿ ಕೃಷಿ ಕಾಯ್ದೆ ಹಿಂಪಡೆದಿದ್ದಾರೆ. ಆದರೆ ಇದು ಕಣ್ಣೊರೆಸುವ ತಂತ್ರ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್ ಮಾತನಾಡಿ, ಇಂದು ಜೆಡಿಎಸ್ ಪಕ್ಷದಿಂದ ಮತ್ತೆ ಸ್ಪರ್ಧಿಸುತ್ತಿರುವ ಅಪ್ಪಾಜಿಗೌಡ ಅವರಿಗೆ ಯಾವ ನೈತಿಕತೆ ಇಲ್ಲ. ಅವರು ಎಂದಾದರೂ ಒಮ್ಮೆ ಜಿಲ್ಲೆಯ ಪರವಾಗಿ ವಿಧಾನ ಪರಿಷತ್ತಿನಲ್ಲಿ ಮಾತನಾಡಿದ್ದಾರೆಯೇ ಎಂದು ಹೇಳುವ ಮೂಲಕ ಪಕ್ಷದ ಅಭ್ಯರ್ಥಿ ದಿನೇಶ್ ಗೂಳಿಗೌಡ ಅವರಿಗೆ ಗೆಲ್ಲಿಸುವಂತೆ ಮನವಿ ಮಾಡಿದರು.
ಪಕ್ಷದ ಅಭ್ಯರ್ಥಿ ದಿನೇಶ್ ಗೂಳಿಗೌಡ ಮಾತನಾಡಿ, ನಾನು ಕಾಂಗ್ರೆಸ್ ಪಕ್ಷಕ್ಕೆ ಪಾಂಚಜನ್ಯ ಯಾತ್ರೆಯ ಮೂಲಕ ಪಾದಾರ್ಪಣೆ ಮಾಡಿ ಅನೇಕ ವರ್ಷಗಳಿಂದ ಪಕ್ಷಕ್ಕೆ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಾ ಬಂದಿದ್ದೇನೆ. ಮುಂದಿನ ದಿನಗಳಲ್ಲಿ ನಿಮಗಾಗಿ 24*7 ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಮಾಜಿ ಶಾಸಕ ರಮೇಶ್ ಬಾಬು, ಮಧು ಜಿ.ಮಾದೇಗೌಡ, ಮದ್ದೂರಿನ ಕಾಂಗ್ರೆಸ್ ಮುಖಂಡ ಗುರುಚರಣ್ , ಮೋಹನ್ ಕುಮಾರ್, ವಿಧಾನ ಪರಿಷತ್ತಿನ ಮಾಜಿ ಸದಸ್ಯ ರಾಮಕೃಷ್ಣ, ಮಹಿಳಾ ಘಟಕದ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ಕೆಪಿಸಿಸಿ ಸದಸ್ಯ ಶಿವಣ್ಣ, ಯುವಘಟಕದ ಕಾಂಗ್ರೆಸ್ ಅಧ್ಯಕ್ಷರಾದ ವಿಜಯ್ ಕುಮಾರ್,ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸುರೇಶ್ ಕಂಠಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಂದರ್ ರಾಜ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವರಾಜು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸುರೇಶ್, ಕಾಂಗ್ರೆಸ್ ಮುಖಂಡ ಹರೀಶ್ ಬಾಬು, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರುಗಳಾದ ವಿ ನಾಗೇಶ್, ಆರ್ ಎನ್ ವಿಶ್ವಾಸ್, ಪುಟ್ಟಸ್ವಾಮಿ ಕಾಂಗ್ರೆಸ್ ಮುಖಂಡರಾದ ಹರೀಶ್ ಬಾಬು ಪೆಟ್ರೋಲ್ ಬಂಕ್ ಮಹದೇವು ಶಿವರಾಜು ಆನಂದ ಪುರಸಭೆ ಮಾಜಿ ಸದಸ್ಯರಾದ ಕಿರಣ್ ಶಂಕರ್ ಪುರಸಭಾ ಸದಸ್ಯರಾದ ಶಿವು ರಾಜ ಶೇಖರ ಎಪಿಎಂಸಿ ಮಾಜಿ ಅಧ್ಯಕ್ಷ ಅಂಬರೀಷ್ ಇನ್ನೂ ಹಲವು ಮುಖಂಡರು ಇದ್ದರು.