ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಮೀಸಲಿಟ್ಟಿರುವ 29 ಎಕರೆ 7 ಗುಂಟೆ ಜಮೀನನ್ನು ಬೇರೆ ಯೋಜನೆಗಳಿಗೆ ಬಳಸಲು ರಾಜ್ಯ ಸರ್ಕಾರ ಮುಂದಾಗಿರುವುದಕ್ಕೆ ಆಮ್ ಆದ್ಮಿ ಪಾರ್ಟಿ ವಿರೋಧ ವ್ಯಕ್ತಪಡಿಸಿದ್ದು, ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಹಾಗೂ ವಸತಿ ಸಚಿವ ವಿ.ಸೋಮಣ್ಣ ಹಸ್ತಕ್ಷೇಪದಿಂದ ದಲಿತರಿಗೆ ಅನ್ಯಾಯವಾಗುತ್ತಿದೆ ಎಂದು ಕಿಡಿಕಾರಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಶಾಸಕ, ಎಎಪಿ ಮುಖಂಡ ಹಾಗೂ ಮಾಜಿ ಶಾಸಕರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಎಚ್.ಡಿ.ಬಸವರಾಜು, “ಬೆಂಗಳೂರಿನ ದಾಸನಪುರ ಹೋಬಳಿಯ ಲಕ್ಷ್ಮೀಪುರ ಗ್ರಾಮದಲ್ಲಿ ಹಾಗೂ ಕೆಂಗೇರಿ ಹೋಬಳಿಯ ಆರಗ ಗ್ರಾಮದಲ್ಲಿ ಒಟ್ಟು 29 ಎಕರೆ 7 ಗುಂಟೆ ಜಮೀನನ್ನು ಆಯ್ಕೆ ಮಾಡಿ, ಎಸ್‌ಸಿ ಎಸ್‌ಟಿ ಸಮುದಾಯದ ವಸತಿರಹಿತರಿಗಾಗಿ ಮೀಸಲಿಡಲಾಗಿತ್ತು. ಇದಕ್ಕಾಗಿ 1,110 ಫಲಾನುಭವಿಗಳ ಆಯ್ಕೆಯನ್ನೂ ಮಾಡಲಾಗಿತ್ತು.
ಆದರೆ ಈಗಿನ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವು ಆ ಜಮೀನನ್ನು ಬೇರೆ ಉದ್ದೇಶಗಳಿಗೆ ಬಳಸಿಕೊಳ್ಳಲು ಮುಂದಾಗಿರುವುದು ಖಂಡನೀಯ. ಇದು ದಲಿತ ವಿರೋಧಿ ಸರ್ಕಾರ ಎಂಬುದು ಇದರಿಂದ ಸಾಬೀತಾಗಿದೆ ಎಂದು ಹೇಳಿದರು.
ವಸತಿ ಸಚಿವರಾಗಿರುವ ವಿ.ಸೋಮಣ್ಣನವರು ಪರಿಶಿಷ್ಟರಿಗೆ ಮೀಸಲಾಗಿರುವ ಜಮೀನನ್ನು ರಾಜೀವ್ ಗಾಂಧಿ ವಸತಿ ನಿಗಮಕ್ಕೆ ನೀಡಬೇಕೆಂದು ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದರು. ಬಿಡಿಎ ಅಧ್ಯಕ್ಷರಾಗಿರುವ ಎಸ್.ಆರ್.ವಿಶ್ವನಾಥ್‌ರವರು ಪರಿಶಿಷ್ಟರಿಗೆ ಜಮೀನು ನೀಡುವ ಪ್ರಕ್ರಿಯೆಯನ್ನೇ ರದ್ದು ಮಾಡಬೇಕೆಂದು ಪತ್ರ ಬರೆದಿದ್ದರು. ಇವರಿಬ್ಬರೂ ದಲಿತ ವಿರೋಧಿಗಳೆಂಬುದು ಇದರಿಂದಲೇ ಸಾಬೀತಾಗಿದೆ.
ಅವರ ತಾಳಕ್ಕೆ ಕುಣಿಯುವ ಮೂಲಕ ಬೊಮ್ಮಾಯಿಯವರೂ ದಲಿತರ ಏಳಿಗೆಗೆ ಅಡ್ಡಗಾಲು ಹಾಕುತ್ತಿದ್ದಾರೆ. ಬಿಜೆಪಿ ಸಂಸದರಾಗಿರುವ ವಿ.ಶ್ರೀನಿವಾಸ್ ಪ್ರಸಾದ್‌ರವರೇ ಸರ್ಕಾರದ ನಿಲುವನ್ನು ವಿರೋಧಿಸಿದ್ದರೂ ಬೊಮ್ಮಾಯಿಯವರು ಎಚ್ಚೆತ್ತುಕೊಂಡಿಲ್ಲ” ಎಂದು ಎಚ್.ಡಿ.ಬಸವರಾಜು ಆಕ್ರೋಶ ವ್ಯಕ್ತಪಡಿಸಿದರು.
ಎಸ್‌ಸಿ, ಎಸ್‌ಟಿ ಸಮುದಾಯದವರಿಗೆ ಪ್ರಸ್ತುತ ಮೀಸಲಿಟ್ಟಿರುವ ನಿವೇಶನ ಹಂಚಿಕೆ ಮಾಡುವ ಬದಲು ಕಟ್ಟಡ ನಿರ್ಮಿಸಿ ಫ್ಲಾಟ್ ಹಂಚಿಕೆ ಮಾಡುವ ವಿ.ಸೋಮಣ್ಣನವರ ಯೋಚನೆಯ ಹಿಂದೆ ಭಾರೀ ಭ್ರಷ್ಟಾಚಾರ ಮಾಡುವ ಹುನ್ನಾರವಿದೆ. ಈ ಹಿಂದೆ ಅವರು ಘೋಷಿಸಿದ್ದ 1 ಲಕ್ಷ ಮನೆ ನಿರ್ಮಾಣ ಯೋಜನೆಯಡಿ ಒಂದೇ ಒಂದು ಮನೆಯೂ ನಿರ್ಮಾಣವಾಗಿಲ್ಲ.
ವಸತಿ ಇಲಾಖೆಯಡಿ ನಿರ್ಮಾಣವಾದ ಬಹುತೇಕ ಕಟ್ಟಡಗಳು ಕಳಪೆ ಕಾಮಗಾರಿಯಿಂದ ಕೂಡಿವೆ. ಆದ್ದರಿಂದ ಪರಿಶಿಷ್ಟರಿಗೆ ನಿವೇಶನ ನೀಡುವ ಯೋಜನೆಯನ್ನು ಯಾವುದೇ ಕಾರಣಕ್ಕೂ ಬದಲಿಸಬಾರದು” ಎಂದು ಎಚ್.ಡಿ.ಬಸವರಾಜು ಆಗ್ರಹಿಸಿದರು.