ಬೆಂಗಳೂರು: ನಗರದಲ್ಲಿ ತಡರಾತ್ರಿ ಸುರಿದ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಒಂದು ಕಡೆ ಮಳೆ ಸಮಸ್ಯೆಯಾದರೆ ಮತ್ತೊಂದೆಡೆ ರಾಜಕಾಲುವೆ ಒಡೆದು ರಸ್ತೆಗಳಿಗೆ ಹಾಗೂ ಮನೆಗಳಿಗೆ ನೀರು ನುಗ್ಗಿದ್ದು, ಹಲವು ನಗರ ನಿವಾಸಿಗಳ ನಿದ್ದೆಗೆಡಿಸಿದೆ.
ಯಲಹಂಕದ ಕೇಂದ್ರೀಯ ವಿಹಾರ ಅಪಾರ್ಟ್‍ಮೆಂಟ್‍ಗೆ ಅಮಾನಿಕೆರೆಯ ನೀರು ತುಂಬಿದ್ದು, ಕಳೆದ ಮೂರ್ನಾಲ್ಕು ದಿನಗಳಿಂದ ಈ ಅಪಾರ್ಟ್‍ಮೆಂಟ್ ಜಲಾವೃತಗೊಂಡಿದೆ. ಅಲ್ಲದೇ ಕಾರು, ಬೈಕ್‍ಗಳು ಕೂಡ ಮುಳುಗಡೆ ಆಗಿವೆ.
ಇನ್ನು ಟಿ. ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ, ನಾಗಸಂದ್ರ, ರುಕ್ಮಿಣಿ ಬಡಾವಣೆ, ಗುಂಡಪ್ಪ ಬಡಾವಣೆ, ಬೆಲ್ಮರ್ ಬಡಾವಣೆ, ರಾಯಲ್ ಎನ್‍ಕ್ಲೇವ್, ಬಿಟಿಎಸ್ ಬಡಾವಣೆಯಲ್ಲಿ ನೀರು ನುಗ್ಗಿದ್ದು, ಚಿಕ್ಕಬಾಣಾವರದಲ್ಲಿ ಬೈಕ್ ಸವಾರರೊಬ್ಬರು ಬಿದ್ದು ಗಾಯಗೊಂಡಿದ್ದಾರೆ.
ಯಶವಂತಪುರದ ಮೋಹನ್‍ಕುಮಾರ್ ನಗರದಲ್ಲಿ ಕಾಂಪೌಂಡ್ ಗೋಡೆ ಕುಸಿದು ಎರಡು ಆಟೋ, ಬೈಕ್ ಜಖಂಗೊಂಡಿವೆ. ಯಶವಂತಪುರದ ಆಂಜನೇಯ ದೇವಸ್ಥಾನಕ್ಕೂ ಸಹ ನೀರು ನುಗ್ಗಿದೆ. ಅಲ್ಲದೇ ಬಿಡಿಎ ಕಚೇರಿ ಸಮೀಪದ ಅಂಡರ್‌ಪಾಸ್‍ನಲ್ಲಿ ನೀರು ನಿಂತು ವಾಹನ ಸವಾರರು ಪರದಾಡಿದ್ದಾರೆ.
ವಿದ್ಯಾರಣ್ಯಪುರದ ವೆಂಕಟಸ್ವಾಮಪ್ಪ ಬಡಾವಣೆಯ ರಸ್ತೆ, ಅಂಗಡಿ, ಮನೆಗಳಿಗೆ ಚರಂಡಿ ನೀರು ನುಗ್ಗಿದ್ದು, ಈ ಕುರಿತಂತೆ `ಶಾಸಕರು, ಅಧಿಕಾರಿಗಳಿಗೆ ಫೋನ್ ಮಾಡಿದರೆ ಭಾನುವಾರ ನಾವು ಬರಲ್ಲ ಅಂತ ಹೇಳಿದ್ದಾರೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದರು.
ಯಲಹಂಕದ ಅಂಡರ್‌ಪಾಸ್‍ನಲ್ಲಿ ನೀರು ನಿಂತಿದ್ದರಿಂದ ವಾಹನ ಸವಾರರು ಪರದಾಡಿದರು ಮತ್ತು ಮೂರ್ನಾಲ್ಕು ಬಿಎಂಟಿಸಿ ಬಸ್ ಸಿಲುಕಿಕೊಂಡವು. ಕೊನೆಗೆ ಅಂಡರ್‌ಪಾಸ್‍ನಲ್ಲಿ ಸಂಚಾರ ಬಂದ್ ಮಾಡಿ ಅನ್ಯ ಮಾರ್ಗದಲ್ಲಿ ವಾಹನಗಳನ್ನು ಚಲಿಸಲು ಅನುವು ಮಾಡಿಕೊಡಲಾಯಿತು.
ಯಲಹಂಕ ವಲಯದ ಜಂಟಿ ಆಯುಕ್ತರಾದ ಪೂರ್ಣಿಮಾ ಮತ್ತು ಇತರ ಅಧಿಕಾರಿಗಳು ಯಲಹಂಕ ವಲಯದ ಸುರಭಿ ಬಡಾವಣೆ ಇನ್ನಿತರ ಮಳೆ ಪ್ರದೇಶದಲ್ಲಿ ಸುರಕ್ಷತಾ ಕ್ರಮ ವಹಿಸಿದರು.