ವಿಜಯಪಥ ಸಮಗ್ರ ಸುದ್ದಿ
ಬನ್ನೂರು: ನಿಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಎಲ್ಲಿಯಾದರು ಬಾಲ್ಯ ವಿವಾಹಗಳು ನಡೆಯುವುದು ಕಂಡುಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಬನ್ನೂರಿನ ಪುರಸಭೆ ಅಧ್ಯಕ್ಷೆ ಭಾಗ್ಯಶ್ರಿ ಕೃಷ್ಣ ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದರು.
ಮೈಸೂರಿನ ಚೈಲ್ಡ್ ಲೈನ್ ಸಂಸ್ಥೆ ವತಿಯಿಂದ ಸರ್ಕಾರಿ ಹೆಣ್ಣು ಮಕ್ಕಳ ಕಾಲೇಜು ಬನ್ನೂರಿನಲ್ಲಿ, ಮಕ್ಕಳ ರಕ್ಷಣೆ ಹಾಗೂ ಬಾಲ್ಯ ವಿವಾಹ ಕುರಿತು ಆಯೋಜಿಸಿದ್ದ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಾಲ್ಯ ವಿವಾಹದಿಂದ ಹೆಣ್ಣುಮಕ್ಕಳಿಗೆ ಆಗುವ ದೈಹಿಕ ಹಾಗೂ ಮಾನಸಿಕ ದುಷ್ಪರಿಣಾಮಗಳ ಬಗ್ಗೆ ನೀವು ಅರಿತುಕೊಳ್ಳುವ ಮೂಲಕ ಇತರರಿಗೂ ತಿಳಿಸಬೇಕು ಎಂದು ಹೇಳಿದರು.
ಇನ್ನು ಬಾಲ್ಯ ವಿವಾಹಗಳನ್ನು ತಡೆಗಟ್ಟುವುದಕ್ಕೆ ಶಾಲೆಗಳ ಮಟ್ಟದಲ್ಲಿ ಗಂಡು ಹಾಗೂ ಹೆಣ್ಣು ಮಕ್ಕಳಿಬ್ಬರಿಗೂ ಜಾಗೃತಿ ಮೂಡಿಸಬೇಕು. ವರ್ಷಕ್ಕೊಮ್ಮೆಯಾದರು ಮಕ್ಕಳ ಪೋಷಕರನ್ನು ಕರೆದು ಕೌನ್ಸಲಿಂಗ್ ಮಾಡಬೇಕು. ಹಳ್ಳಿಗಳಲ್ಲಿ ಗ್ರಾಮ ಪಂಚಾಯಿಯ ಮೂಲಕ ಜನರಿಗೆ ಆಗಿಂದಾಗೆ ಅರಿವು ಮೂಡಿಸುವುದರಿಂದ ಬಾಲ್ಯ ವಿವಾಹಗಳಿಂದ ಮಕ್ಕಳ ಜೀವನ ನಾಶವಾಗದಂತೆ ಕಾಪಾಡಬಹುದು ಎಂದರು.
ಮಹಾನಗರಗಳಲ್ಲಿ ಕೆಲಸ ಕೊಡಿಸುವುದಾಗಿ ಹೆಣ್ಣುಮಕ್ಕಳ ತಂದೆತಾಯಿರವರಿಗೆ ಹಣದ ಆಮಿಷ ತೋರಿಸಿ ಹೆಣ್ಣು ಮಕ್ಕಳ ಕಳ್ಳ ಸಾಗಣೆ ಮಾಡುವ ಮೋಸಗಾರರ ಬಗ್ಗೆ ಮಾಧ್ಯಮಗಳಲ್ಲಿ ಆಗಿಂದಾಗೆ ಸುದ್ದಿಗಳು ಪ್ರಸಾರವಾಗುತ್ತಿರುತ್ತವೆ. ಹೀಗಾಗಿ ಈ ಬಗ್ಗೆ ಹೆಣ್ಣು ಮಕ್ಕಳು ಜಾಗ್ರತೆ ವಹಿಸಬೇಕು ಜತೆಗೆ ಅಂಥವರ ಸುಳಿವು ಸಿಕ್ಕರೆ ಪೊಲೀಸರಿಗೆ ಮಾಹಿತಿ ನೀಡುವಂತೆ ತಿಳಿಸಿದರು.
ಬನ್ನೂರು ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ರವಿಕುಮಾರ್, ತಿ. ನರಸೀಪುರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ ಹಿರಿಯ ಮೇಲ್ವಿಚಾರಕಿ ವಿದ್ಯಾವತಿ ಪಾಟೀಲ್, ಬನ್ನೂರು ಶಿಕ್ಷಣ ಸಂಯೋಜಕ ಪರಮೇಶ್ವರ್, ಮೈಸೂರು ಜಿಲ್ಲಾ ಸಂಯೋಜಕ ಧನರಾಜ್, ಕಾಲೇಜಿನ ಪ್ರಾಂಶುಪಾಲ ಎಂ.ಮರಿಸ್ವಾಮಿ, ಮೈಸೂರು ಮಕ್ಕಳ ಸಹಾಯವಾಣಿ ಸಂಯೋಜಕ ಎಸ್. ಶಶಿಕುಮಾರ್, ಬನ್ನೂರು ಪೊಲೀಸ್ ಠಾಣೆ ಎಎಸ್‌ಐ ರಂಗಸ್ವಾಮಿ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಉಪನ್ಯಾಸಕರು ಮತ್ತು ಶಿಕ್ಷಕರು ಮತ್ತು ಕಾಲೇಜು ವಿದ್ಯಾರ್ಥಿನಿಯರು ಇದ್ದರು.