ವಿಜಯಪಥ ಸಮಗ್ರ ಸುದ್ದಿ
ಪಿರಿಯಾಪಟ್ಟಣ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಶ್ರೀನಿವಾಸ್ ವರದಿ ಮಾಡಲು ತೆರಳಿದ್ದ ಪತ್ರಕರ್ತ ಟಿ.ಜೆ.ಆನಂದ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿ ದೌರ್ಜನ್ಯ ನಡೆಸಿದ್ದಲ್ಲದೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಆನಂದ್ ವಿರುದ್ಧ ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾಗಿ ಆರೋಪಿಸಿ ದೂರು ನೀಡಿದ್ದು, ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ತಹಸೀಲ್ದಾರ್ ಚಂದ್ರಮೌಳಿ ಅವರಿಗೆ ಗುರುವಾರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಮನವಿ ಸಲ್ಲಿಸಿದರು.
ಪತ್ರಕರ್ತ ಆನಂದ್ ಅವರಿಗೆ ಮೇ 18 ರಂದು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಔಷಧ ವಿತರಕರು ಇಲ್ಲದೆ ಔಷಧ ನೀಡುತ್ತಿಲ್ಲ, ಇದರಿಂದ ರೋಗಿಗಳಿಗೆ ತೊಂದರೆಯಾಗುತ್ತಿದೆ ಎಂಬ ಮಾಹಿತಿ ದೊರತಿದ್ದು ತಕ್ಷಣ ಆಸ್ಪತ್ರೆಗೆ ತೆರಳಿ ಫೋಟೋ ತೆಗೆದು ಕೊಂಡು ಔಷಧಿಗೆ ಸರತಿಸಾಲಿನಲ್ಲಿ ನಿಂತಿದ್ದ ರೋಗಿಗಳ ಹೇಳಿಕೆ ಪಡೆದುಕೊಳ್ಳುವ ಸಮಯಕ್ಕೆ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಶ್ರೀನಿವಾಸ್ ಅಲ್ಲಿಗೆ ಆಗಮಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಸಂಘದ ಅಧ್ಯಕ್ಷ ಸಿ.ಎನ್.ವಿಜಯ್ ಆರೋಪಿಸಿದರು.
ಅಲ್ಲದೆ ಇಲ್ಲಿ ಸಮಸ್ಯೆ ಇಲ್ಲ ನೀನೆ ಸಮಸ್ಯೆ ಸೃಷ್ಟಿಸುತ್ತಿದ್ದೀಯ ನೀನು ಇಲ್ಲಿಂದ ಹೊರಡದಿದ್ದರೆ ನಿನ್ನನ್ನು ಕೊಲೆ ಮಾಡುತ್ತೇನೆ ಎಂದು ಕೊಲೆ ಬೆದರಿಹಾಕಿದ್ದಲ್ಲದೆ ಅಲ್ಲಿಂದ ತೆರಳದಂತೆ ಅಡ್ಡಗಟ್ಟಿ ಪೊಲೀಸರಿಗೆ ಕರೆ ಮಾಡಿದ್ದಾರೆ. ಈ ಸಮಯದಕ್ಕೆ ದಲಿತ ಸಂಘಟನೆಯ ಮುಖಂಡರಾದ ಅಣ್ಣಯ್ಯ, ಪಿ.ಪಿ.ಮಹದೇವ್ ಮತ್ತು ಇತರರು ಸಹ ಸ್ಥಳಕ್ಕೆ ಬಂದು ಆಡಳಿತಾಧಿಕಾರಿಯನ್ನು ಪ್ರಶ್ನಿಸಿದ್ದಾರೆ. ಈ ವಿಷಯ ಕೆಲವು ದಿನಪತ್ರಿಕೆಗಳಲ್ಲಿ ಸಹ ವರದಿಯಾಗಿದೆ. ಸ್ಥಳಕ್ಕೆ ಬಂದ ಪೊಲೀಸರು ಡಾ.ಶ್ರೀನಿವಾಸ್‌ಗೆ ಬುದ್ದಿ ಮಾತು ಹೇಳಿ ಪತ್ರಕರ್ತರ ಕೆಲಸಕ್ಕೆ ಅಡ್ಡಿಮಾಡುವುದು ತಪ್ಪು ಮತ್ತು ಸಕಾಲದಲ್ಲಿ ಔಷಧ ವಿತರಿಸಲು ಕ್ರಮಕೈಗೊಳ್ಳುವಂತೆ ತಿಳಿಸಿ ಸ್ಥಳದಿಂದ ಹೊರಟಿದ್ದಾರೆ ಎಂದು ತಿಳಿಸಿದರು.
ಈ ಘಟನೆಯಲ್ಲಿ ಆಸ್ಪತ್ರೆಯಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲಿನ ದೃಶ್ಯವನ್ನು ಪರಿಶೀಲಿಸುವಂತೆ ತಹಸೀಲ್ದಾರ್ ಗೆ ಮನವಿ ಮಾಡಿದರು. ವಸ್ತುಸ್ಥಿತಿ ಹೀಗಿದ್ದರೂ ಡಾ.ಶ್ರೀನಿವಾಸ್ ಅವರು ಪತ್ರಕರ್ತ ಆನಂದ್ ವಿರುದ್ಧ ಅದೇ ದಿನ ಸಂಜೆ ಪೊಲೀಸ್ ಠಾಣೆಯಲ್ಲಿ ಸುಳ್ಳು ದೂರು ದಾಖಲಿಸಿದ್ದಾರೆ ಎಂದು ಆರೋಪಿಸಿದರು.
ಈ ಹಿಂದೆ ಡಾ.ಶ್ರೀನಿವಾಸ್ ಅವರು ಆಸ್ಪತ್ರೆಗೆ ಬೇಕಿದ್ದ ಅಗತ್ಯ ವಸ್ತುಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆಸಿರುವ ಬಗ್ಗೆ ಸಂಶಯ ಬಂದಿದ್ದರಿಂದ ಮಾಹಿತಿ ಹಕ್ಕು ಕಾಯಿದೆ ಅಡಿಯಲ್ಲಿ ಮಾಹಿತಿ ಕೋರಿ ಆನಂದ್ ಅರ್ಜಿಸಲ್ಲಿಸಿದ್ದು, ರೆಮ್‌ಡಿಸಿವಿರ್ ದುರುಪಯೋಗವಾಗಿರುವ ಬಗ್ಗೆ ಸಹ ತಮ್ಮ ಪತ್ರಿಕೆಯಲ್ಲಿ ವರದಿ ಪ್ರಕಟಿಸಿದ್ದರು ಇದನ್ನು ಮನಸ್ಸಿನಲ್ಲಿಟ್ಟು ಕೊಂಡು ಅವರ ವಿರುದ್ಧ ಈ ಸುಳ್ಳು ದೂರು ನೀಡಿದ್ದಾರೆ ಎಂದು ದೂರಿದರು.
ಕೂಡಲೆ ಆಸ್ಪತ್ರೆ ಆಡಳಿತಾಧಿಕಾರಿಯನ್ನು ಅಮಾನತು ಪಡಿಸಬೇಕು ಮತ್ತು ಅವರು ಮಾಡಿರುವ ಖರೀದಿ ಅವ್ಯವಹಾರದ ಬಗ್ಗೆ ಹಾಗೂ ರೆಮ್‌ಡಿಸಿವಿರ್ ದುರುಪಯೋಗದ ಬಗ್ಗೆ ತನಿಖೆ ನಡೆಸ ಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಎನ್. ದೇವೇಗೌಡ, ಉಪಾಧ್ಯಕ್ಷ ಬಿ.ಸಿ.ತಮ್ಮಣ್ಣೇಗೌಡ, ಖಜಾಂಚಿ ಸತೀಶ್ ಆರಾಧ್ಯ, ಪದಾಧಿಕಾರಿಗಳಾದ ಪಿ.ಎಸ್.ವೀರೇಶ್, ಇಮ್ತಿಯಾಜ್, ಪಿ.ಡಿ.ಪ್ರಸನ್ನ, ಪ್ರಸನ್ನಕುಮಾರ್, ಜಿಲ್ಲಾ ಕಾರ್ಯಕಾರಿ ಸಮಿತಿ ನಿರ್ದೇಶಕ ಬಿ.ಆರ್,ಗಣೇಶ್, ಪತ್ರಕರ್ತಕರಾದ ನವೀನ್ ಕುಮಾರ್, ಪವನ್ ಕುಮಾರ್, ರಾಮೇಗೌಡ, ಕೋಗಿಲವಾಡಿ ಮಹೇಶ್, ಸಿ.ಜಿ.ಪುನೀತ್, ಎಚ್.ಕೆ.ಮಹೇಶ್, ಅಶ್ವಥ್, ಜೋಗನಹಳ್ಳಿ ಲೋಕೇಶ್, ಕೆ.ಪಿ.ವೆಂಕಟೇಶ್ ಇದ್ದರು.