ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆಯ ನಿಗಮದ ಕೆಲ ಅಧಿಕಾರಿಗಳನ್ನು ನ.30ರಂದು ವರ್ಗಾವಣೆ ಮಾಡಿ ಸಂಸ್ಥೆಯ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಆದೇಶ ಹೊರಡಿಸಿದ್ದಾರೆ.
ಆದರೆ ವರ್ಗಾವಣೆಗೊಂಡಿರುವ ಕೆಲ ಅಧಿಕಾರಿಗಳು ಈಗ ಕಾರ್ಯ ನಿರ್ವಹಿಸುತ್ತಿರುವ ಸ್ಥಳದಲ್ಲೇ ಉಳಿದುಕೊಳ್ಳಲು ಕೆಲ ರಾಜಕೀಯ ವ್ಯಕ್ತಿಗಳಿಂದ ಒತ್ತಡ ಹಾಕಿಸುತ್ತಿದ್ದಾರೆ ಮತ್ತು ಇನ್ನು ಕೆಲ ಅಧಿಕಾರಿಗಳು 7-8 ಲಕ್ಷ ರೂ. ಲಂಚ ನೀಡಿ ಉಳಿದುಕೊಳ್ಳಲು ಮುಂದಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ನವೆಂಬರ್ 30ರಂದು ಸಂಸ್ಥೆಯ ಹಿತದೃಷ್ಟಿಯಿಂದ ಕೋರಿಕೆ/ ಆಡಳಿತಾತ್ಮಕ ಕಾರಣಗಳ ಮೇರೆಗೆ ಅವರ ಹೆರಸರಿನ ಮುಂದೆ ನಮೂದಿಸಿದ ಹುದ್ದೆ/ ಸ್ಥಳಗಳಿಗೆ ಸೂಕ್ತಾಧಿಕಾರಿಗಳ ಆದೇಶದಂತೆ ನಿಯೋಜಿಸಲಾಗಿದೆ.
ವರ್ಗಾವಣೆಗೊಂಡ ಅಧಿಕಾರಿಗಳ ಪಟ್ಟಿ
ಆದರೆ, ನೌಕರರಿಗೆ ಕಿರುಕುಳ ನೀಡುತ್ತ ಬಂದಿರುವ ಇವರಲ್ಲಿ ಕೆಲ ವಿಭಾಗೀಯ ನಿಯಂತ್ರಣಾಧಿಕಾರಿಗಳು ಈಗ ವರ್ಗಾವಣೆಗೊಂಡಿರುವ ಸ್ಥಳಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದು, ಬೆಂಗಳೂರಿನ ಮುಖ್ಯಕಚೇರಿಗೆ ಬಂದು ಲಂಚಾಮೀಷ ಒಡ್ಡುತ್ತಿದ್ದಾರೆ ಎಂಬ ಆರೋಪವಿದೆ.
ಹಲವು ವಷಗಳಿಂದ ಒಂದೇಕಡೆ ಬೇರುಬಿಟ್ಟಿರುವ ಅಧಿಕಾರಿಗಳು ವರ್ಗಾವಣೆಗೊಂಡ ಸ್ಥಳಕ್ಕೆ ಹೋಗದೆ ಅಧಿಕಾರಿಗಳನ್ನು ಲಂಚ ನೀಡುವ ಮೂಲಕ ಕಟ್ಟಿಹಾಕಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಹೊರಟಿದ್ದಾರೆ ಎಂಬ ದೂರುಗಳು ಕೇಳಿಬರುತ್ತಿವೆ.
ಆದರೆ, ಈ ಅಧಿಕಾರಿಗಳು ನೀಡುವ ಲಂಚಕ್ಕೆ ಕೈ ಚಾಚಿ ಯಾವುದೋ ಒಂದು ಕಾರಣ ನೀಡಿ ಅವರನ್ನು ಮೂಲ ಸ್ಥಳದಲ್ಲೇ ಮುಂದುವರಿಸಿದರೆ, ನಾವು ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸುತ್ತೇವೆ ಎಂದು ನೌಕರರು ಎಚ್ಚರಿಕೆ ನೀಡಿದ್ದಾರೆ.