ಗದಗ: ಆಟೋದಲ್ಲಿ ಪ್ರಯಾಣಿಸಿ ಇಳಿದು ಹೋಗುವಾಗ ಮಹಿಳೆಯೊಬ್ಬರು ಆಟೋದಲ್ಲೇ ಬಿಟ್ಟುಹೋಗಿದ್ದ ಚಿನ್ನಾಭರಣ ವಾಪಸ್ ಕೊಡುವ ಮೂಲಕ ಆಟೋ ಚಾಲಕ ವೀರಣ್ಣ ಎಂಬುವರು ಪ್ರಾಮಾಣಿಕತೆ ಮೆರೆದಿದ್ದು ಅವರನ್ನು ಡಿವೈಎಸ್‌ಪಿ ಸನ್ಮಾನಿಸಿ ಅವರ ಪ್ರಮಾಣಿಕತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗದಗದ ಆಟೋ ಚಾಲಕ ವೀರಣ್ಣ ಯಾವಗಲ್ ಪ್ರಾಮಾಣಿಕತೆ ಮೆರೆದ ಆಟೋ ಚಾಲಕರು. ಗದಗದ ನರಸಾಪುರದಲ್ಲಿ ಆಟೋ ಹತ್ತಿದ್ದ ವೀಣಾ ಎಂಬುವರು ಗಂಜಿ ಬಸವೇಶ್ವರ ಸರ್ಕಲ್ ಬಳಿ ಇಳಿದು ಹೋಗಿದ್ದರು. ಆ ವೇಳೆ 8 ತೋಲ ಬಂಗಾರವಿದ್ಧ ಬ್ಯಾಗನ್ನು ಮರೆತು ಆಟೋದಲ್ಲೇ ಆ ಮಹಿಳೆ ಬಿಟ್ಟು ಹೋಗಿದ್ದರು.
ವೀಣಾ ಅವರು ಆಟೋ ಇಳಿದ ಬಳಿಕ ಚಾಲಕ ವೀರಣ್ಣ ಅವರೂ ಸಹ ಆಟೋವನ್ನು ಮುಂದೆ ಓಡಿಸಿಕೊಂಡು ಹೋಗಿದ್ದರು. ಆದರೆ ಆಟೋ ಚಾಲಕ ವೀರಣ್ಣ ಅವರು ಹಿಂದಿನ ಸೀಟಿನ ಮೆಲಿದ್ದ ಬ್ಯಾಗ್ ಗಮನಿಸದೇ ಬೇರೆ ಪ್ರಯಾಣಿಕರನ್ನು ಹತ್ತಿಸಿಕೊಂಡು ಮುಂದೆ ಸಾಗಿದ್ದಾರೆ. ಇದಾದ ಸ್ವಲ್ಪ ಹೊತ್ತಿಗೆ ಮಹಿಳೆಗೆ ತನ್ನ ಚಿನ್ನದ ಬ್ಯಾಗ್ ಆಟೋದಲ್ಲಿಯೇ ಮರೆತು ಇಳಿದು ಬಂದಿದ್ದೇನೆ ಎಂಬುವುದು ನೆನಪಾಗಿದೆ.
ಆ ವೇಳೆ ಗಾಬರಿಯಿಂದಲೇ ಸುಮಾರು ಹೊತ್ತು ಆಟೋ ಹುಡುಕಾಡಿದ್ದಾರೆ. ಆದರೆ ಎಲ್ಲಿಯೂ ಆ ಆಟೋ ಸಿಕ್ಕಿಲ್ಲ. ಕೊನೆಗೆ ಸಿಕ್ಕಸಿಕ್ಕ ಆಟೋಗಳ ಚಾಲಕರಿಗೆ ಮಾಹಿತಿ ನೀಡಿದ್ದಾರೆ. ಆದರೆ ಆ ಆಟೋ ಮಾತ್ರ ಸಿಗಲಿಲ್ಲ. ಆದರೆ ಇತ್ತ ಸಂಜೆಯಾಗುತ್ತಿದ್ದಂತೆ ನಗರದ ಶಹರ್ ಪೊಲೀಸ್ ಠಾಣೆಯಿಂದ ಕರೆಯೊಂದು ಬಂದಿದೆ. ಆ ಕರೆಯ ಧ್ವನಿ ನಿಮ್ಮ ಬ್ಯಾಗ್ ಸಿಕ್ಕಿದೆ ಬನ್ನಿ ಎಂದು ಆಹ್ವಾನಿಸಿದೆ. ಆಗ ವೀಣಾ ಅವರಿಗೆ ಹೋದ ಜೀವ ಮರಳಿ ಬಂದಂತಾಗಿದೆ.
ಸಾಕಷ್ಟು ಆಟೋಗಳು ಹುಡುಕಿದ್ದೆ, ಸಿಕ್ಕಿರಲಿಲ್ಲ: ಗದಗ ನಗರದಲ್ಲಿ ಇದ್ದ ಮನೆ ವಾಸ್ತು ಶಾಂತಿ ಕಾರ್ಯಕ್ರಮಕ್ಕೆ ಬಂದಿದ್ದೆ. ಆಟೋ ಚಿನ್ನದ ಬ್ಯಾಗ್ ಕಳೆದುಕೊಂಡು ಕಂಗಾಲಾಗಿದ್ದೆ. ಸಾಕಷ್ಟು ಆಟೋಗಳು ಹುಡುಕಿದ್ದೆ, ಸಿಕ್ಕಿರಲಿಲ್ಲ. ಆಮೇಲೆ ಪೊಲೀಸ್ ಠಾಣೆಯಿಂದ ನಿಮ್ಮ ಚಿನ್ನ ಸಿಕ್ಕಿದೆ ಅಂತಾ ಕರೆ ಬಂತು. ಹೋದ ಜೀವ ಮರಳಿ ಬಂದಂತಾಯ್ತು. ತುಂಬಾ ಖುಷಿಯಾಗಿದೆ ಅಂತ ಚಿನ್ನ ಕಳೆದುಕೊಂಡ ವೀಣಾ ಕೊಣ್ಣೂರು ಸಂತಸ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ ಈ ಚಿನ್ನ ಮರುಕಳಿಸಿದ ಆಟೋ ಚಾಲಕ ವೀರಣ್ಣ ಯಾವಗಲ್ ಅವರಿಗೆ ಅಭಿನಂದನೆ ಹೇಳಲೇ ಬೇಕು. ಯಾಕೆಂದರೆ ಮಹಿಳೆ ತಾನು ಯಾವ ಆಟೋ ಹತ್ತಿದ್ದೆ ಅನ್ನೋದನ್ನೆ ಸರಿಯಾಗಿ ಗಮನಿಸಿರಲಿಲ್ಲ. ಚಾಲಕನನ್ನೂ ಗಮನಿಸಿಲ್ಲ. ಕೇವಲ ಆಟೋದಲ್ಲಿ ಮಾತ್ರ ಬ್ಯಾಗ್ ಬಿಟ್ಟೋಗಿದೀನಿ ಅನ್ನೋದಷ್ಟೆ ಆಕೆಗೆ ಗೊತ್ತಿತ್ತು.
ಗದಗದಲ್ಲಿ ಸುಮಾರು 2 ಸಾವಿರ ಆಟೋ ಚಾಲಕರಿದ್ದಾರೆ. ಅಂತಹುದರಲ್ಲಿ ಯಾವ ಆಟೋ ಚಾಲಕ ಅಂತಾ, ಹೇಗೆ ಗುರುತಿಸೋದು? ಅನ್ನೋದೆ ದೊಡ್ಡ ತಲೆನೋವಾಗಿತ್ತು. ಕೊನೆಗೆ ನನ್ನ ಚಿನ್ನ ನನ್ನ ಕೈಬಿಟ್ಟಿದೆ ಅಂತಾನೂ ಭಾವಿಸಿದ್ದೆ ಎಂದು ಹೇಳಿದರು.
ಆದರೆ ಇತ್ತ ಚಾಲಕ ಇನ್ನೇನು ಸಂಜೆಯಾಯಿತು ಮನೆಗೆ ಹೋಗೋಣ ಅಂದುಕೊಂಡು ಹಿಂದೆ ತಿರುಗಿ ನೋಡಿದಾಗ ಯಾವುದೋ ಒಂದು ಕಪ್ಪನೆಯ ಬ್ಯಾಗ್ ಕಂಡಿದೆ. ಅದು ಯಾರದಾಗಿರಬಹುದು ಅಂತಾ ತನ್ನಲ್ಲೇ ಲೆಕ್ಕ ಹಾಕಿಕೊಂಡಿದ್ದಾರೆ. ಆದರೆ ಆತನಿಗೂ ಯಾರದೂ ಅಂತಾ ಗೊತ್ತಾಗಿಲ್ಲ. ಕೊನೆಗೆ ದಾರಿ ಹಿಡಿದಿದ್ದು ಪೊಲೀಸ್ ಠಾಣೆಯದ್ದು. ಪೊಲೀಸ್ ಠಾಣೆಗೆ ಬಂದು ಆ ಬ್ಯಾಗ್ ಒಪ್ಪಿಸಿದ ಚಾಲಕ ತನ್ನ ಭಾರ ಇಳಿಯಿತು ಎಂದು ಮನಸ್ಸಿನಲ್ಲೇ ಸಂತಸ ಪಟ್ಟುಕೊಂಡಿದ್ದಾರೆ.
ನನ್ನ ತಂಗಿಗೆ ಕೊಟ್ಟ ರಕ್ಷಾ ಬಂಧನದ ಉಡುಗೊರೆ: ಇನ್ನು ಇದು ನನ್ನ ತಂಗಿಗೆ ಕೊಟ್ಟ ರಕ್ಷಾ ಬಂಧನದ ಉಡುಗೊರೆ ಅಂತಾ ಆಟೋ ಚಾಲಕ ವೀರಣ್ಣ ಯಾವಗಲ್ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಪ್ರಾಮಾಣಿಕ ವೀರಣ್ಣ ಯಾವಗಲ್ ಅವರಿಗೆ ಡಿವೈಎಸ್ಪಿ ಶಿವಾನಂದ ಶಾಲು ಹೊದಿಸಿ, ಸನ್ಮಾನ ಮಾಡಿ ಅವರ ಕಾರ್ಯವನ್ನು ಶ್ಲಾಘಿಸಿದ್ದಾರೆ. ವೀರಣ್ಣ ಅವರಿಗೆ ಇದು ಎರಡನೇ ಘಟನೆಯಂತೆ. ಹಿಂದೆ ಇದೇ ರೀತಿ ಪ್ರಾಮಾಣಿಕತೆ ಮೆರೆದು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.
ಇಂಥ ಪ್ರಾಮಾಣಿಕ ಆಟೋ ಚಾಲಕರು ರಾಜ್ಯಾದ್ಯಂತ ಹೆಚ್ಚಾಗಲಿ. ಸುರಕ್ಷಿತಾ ಪ್ರಯಾಣದ ಜತೆಗೆ ಈ ರೀತಿ ಗಾಬರಿಯಿಂದಲೂ ಇನ್ನಾವುದೋ ಒತ್ತಡದಿಂದಲೋ ಮರೆತು ಬಿಟ್ಟುಹೋಗುವ ವಸ್ತುಗಳನ್ನು ತಲುಪಿಸುವ ಕೆಲಸವನ್ನು ಮಾಡಲಿ….