ಹನೂರು: ಬಾಲ್ಯ ವಿವಾಹವನ್ನು ನಿಲ್ಲಿಸಿದ ಕೋಪಕ್ಕೆ ಅಂಗನವಾಡಿ ಕೇಂದ್ರವನ್ನೇ ಕಟ್ಟಡ ಮಾಲೀಕ ಸ್ಥಳಾಂತರ ಮಾಡಿಸಿರುವ ಘಟನೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಂಡಿಗನತ್ತ ಗ್ರಾಮದಲ್ಲಿ ನಡೆದಿದೆ.
ಎರಡು ವರ್ಷಗಳಿಂದ ಗ್ರಾಮದ ಕುಮಾರ್ ಎಂಬುವರ ಮನೆಯನ್ನು ಬಾಡಿಗೆ ಪಡೆದು ಅಂಗನವಾಡಿಯನ್ನು ನಡೆಸಲಾಗುತ್ತಿತ್ತು. ಆದರೆ ಮಾಲೀಕ ಕುಮಾರ್ ತಮ್ಮ ಮಗಳನ್ನು ಬಾಲ್ಯವಿವಾಹಕ್ಕೆ ಮುಂದಾಗಿದ್ದರು. ಇದನ್ನು ತಿಳಿದ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಗುರುವಾರ ಬಾಲ್ಯವಿವಾಹ ನಡೆಸದಂತೆ ತಿಳಿವಳಿಕೆ ನೀಡಿದ್ದರು. ಇದರಿಂದ ಕೋಪಗೊಂಡ ಕುಮಾರ್ ಶುಕ್ರವಾರ ಏಕಾಏಕಿ ಅಂಗನವಾಡಿ ಖಾಲಿ ಮಾಡಿಸಿದ್ದಾರೆ.
ಕಟ್ಟಡ ಮಾಲೀಕ ಯಾವುದೇ ಸಬೂಬು ಕೊಡದೆ ಮತ್ತು ಸಮಯಾವಕಾಶವನ್ನು ನೀಡದೇ ಅಂಗನವಾಡಿ ಕೇಂದ್ರವನ್ನು ಖಾಲಿ ಮಾಡಿಸಿದ್ದರಿಂದ ಪಾತ್ರೆಗಳು, ಸಿಲಿಂಡರ್, ಬೋರ್ಡ್‌ಗಳನ್ನು ಬೀದಿಗಿಟ್ಟು ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ದಿಕ್ಕು ತೋಚದೇ ಪರಿತಪಿಸುತ್ತಿದ್ದಾರೆ.
ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕರು ಕಾನೂನು ಬಾಹಿರವಾದ ಮದುವೆಯನ್ನು ತಡೆದಿದ್ದರಿಂದ ಅಂಗನವಾಡಿ ಕೇಂದ್ರವನ್ನು ಖಾಲಿ ಮಾಡಿಸಿದ್ದಾರೆ. ಗ್ರಾಮದಲ್ಲಿನ ಶಾಲೆಯ ಕೊಠಡಿಯೊಂದನ್ನು ತಾತ್ಕಾಲಿಕವಾಗಿ ಅಂಗನವಾಡಿ ಕೇಂದ್ರ ನಡೆಸಲು ನೀಡುವಂತೆ ಬಿಇಒ ಅವರಿಗೆ ಮನವಿ ಮಾಡಿದ್ದೇವೆ. ಗ್ರಾಮದಲ್ಲಿ ಅಂಗನವಾಡಿ ಸ್ವಂತ ಕಟ್ಟಡದ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಅದು ಪೂರ್ಣಗೊಂಡ ಬಳಿಕ ಅಲ್ಲಿಗೆ ಸ್ಥಳಾಂತರ ಮಾಡಲಾಗುವುದು ಎಂದು ಕೊಳ್ಳೇಗಾಲ ಸಿಡಿಪಿಒ ನಾಗೇಶ್ ತಿಳಿಸಿದ್ದಾರೆ.