ತಿ.ನರಸೀಪುರ: ಪಾಪದ ಕೊಡ ತುಂಬಲು ನಮ್ಮಪ್ಪ (ಸಿದ್ದರಾಮಯ್ಯ) ಯಾವುದೇ ಪಾಪ ಮಾಡಿಲ್ಲ ಎಂದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ವರುಣ ವಿಧಾನಸಭಾ ಕ್ಷೇತ್ರದ ಮೈಸೂರು ತಾಲೂಕಿನ ಚಟ್ನಹಳ್ಳಿಪಾಳ್ಯ ಗ್ರಾಮದಲ್ಲಿ ಶುಕ್ರವಾರ ಬಸವ ಭವನ ಉದ್ಘಾಟಿಸಿ ಗ್ರಾಮಸ್ಥರ ಅಹವಾಲು ಆಲಿಸಿದ ಬಳಿಕ ಮಾತನಾಡಿದರು. ಸಿದ್ದರಾಮಯ್ಯ ಅವರ ಪಾಪದ ಕೊಡ ತುಂಬಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಗುಡುಗಿದ್ದಕ್ಕೆ ಪ್ರತಿದಾಳಿ ನಡೆಸಿದ ಯತೀಂದ್ರ, ಜೆಡಿಎಸ್‌ಗೆ ಸಿದ್ದರಾಮಯ್ಯ ಅವರು ಯಾವ ಮೋಸ ಮಾಡಿಲ್ಲ. ಬೆಳೆಯುತ್ತಿರುವ ನಾಯಕರನ್ನು ಚಿವುಟಿ ಹಾಕಲು ಪಕ್ಷದಿಂದ ಉಚ್ಚಾಟಿಸಿದ್ದರು. ಜೆಡಿಎಸ್‌ನಿಂದ ಹೊರಬಂದ ಮೇಲೆ ತುಂಬಾ ಒಳ್ಳೆಯದಾಗಿದೆ ಎಂದರು.
ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಮುಂದಿನ ಚುನಾವಣೆಯೂ ಸಿದ್ದರಾಮಯ್ಯ, ಪಕ್ಷದ ಅಧ್ಯಕ್ಷರ ನೇತೃತ್ವದಲ್ಲಿ ನಡೆಯುತ್ತದೆ. ಜೆಡಿಎಸ್ ಮಾತ್ರ ದಿನೇದಿನೆ ನೆಲೆ ಕಳೆದುಕೊಳ್ಳುತ್ತಿದೆ ಎಂದು ಕುಮಾರಸ್ವಾಮಿ ವಿರುದ್ಧ ಡಾ.ಯತೀಂದ್ರ ವಾಗ್ದಾಳಿ ನಡೆಸಿದರು.
ಚಟ್ನಹಳ್ಳಿಪಾಳ್ಯದಲ್ಲಿ ಬಸವ ಭವನ ಉದ್ಘಾಟನೆ
ಆಡಳಿತಾತ್ಮಕ ಸಮಸ್ಯೆಗಳಿಂದಾಗಿ ಸರ್ಕಾರದಿಂದ ಅನುದಾನ ಬಿಡುಗಡೆ ವಿಳಂಬವಾಗಿದ್ದರಿಂದ ಅಭಿವೃದ್ಧಿ ಕಾಮಗಾರಿಗಳು ನೆನಗುದಿಗೆ ಬಿದ್ದಿದ್ದು, ಅನುದಾನ ಮಂಜೂರಾದ ಮೇಲೆ ಚಟ್ನಹಳ್ಳಿಪಾಳ್ಯ ಗ್ರಾಮ ಸಂಪರ್ಕಿಸುವ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಡಾ.ಯತೀಂದ್ರ ಭರವಸೆ ನೀಡಿದರು.
ರಾಜ್ಯ ಸರ್ಕಾರದ ಆಡಳಿತಾತ್ಮಕ ಸಮಸ್ಯೆಯಿಂದ ಅಭಿವೃದ್ಧಿ ಕಾಮಗಾರಿಗಳ ಅನುದಾನವನ್ನು ತಡೆ ಹಿಡಿದ್ದರಿಂದ ಕಳೆದೊಂದು ವರ್ಷದಿಂದ ಹಲವಾರು ಅಭಿವೃದ್ಧಿ ಕೆಲಸ ನೆನಗುದಿಗೆ ಬಿದ್ದಿವೆ. ಹಾಗಾಗಿ ಚಟ್ನಹಳ್ಳಿ ಪಾಳ್ಯದ ಸುತ್ತಮುತ್ತಲಿನ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡಿಲ್ಲ ಎಂದರು.
ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಅವರು ವರುಣ ಕ್ಷೇತ್ರದ ಶಾಸಕರಾಗಿದ್ದರಿಂದ ಗ್ರಾಮದಲ್ಲಿ ಬಸವ ಭವನ ನಿರ್ಮಾಣಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ 10 ಲಕ್ಷ ರೂ. ಅನುದಾನ ನೀಡಿದ್ದರು ಎಂದ ಅವರು, ಬಸವ ಬಳಗದ ಸ್ವಾಗತ ಕೋರುವ ದ್ವಾರ ಮಂಟಪ ನಿರ್ಮಾಣಕ್ಕೆ ವೈಯುಕ್ತಿಕವಾಗಿ ನೆರವು ನೀಡಲಾಗುವುದು ಎಂದು ತಿಳಿಸಿದರು.
ವೀರಶೈವ ಮಹಾಸಭಾದ ಕೋಶಾಧ್ಯಕ್ಷ ವರುಣ ಮಹೇಶ್, ಕಾಂಗ್ರೆಸ್ ಮಾನವ ಹಕ್ಕುಗಳ ಸಮಿತಿ ಅಧ್ಯಕ್ಷ ಪಾಳ್ಯ ಸುರೇಶ್, ಹಿರಿಯ ಮುಖಂಡರಾದ ಪಿಜಿ ಹುಂಡಿ ಮಹದೇವಪ್ಪ, ಕೀಳನಪುರ ಮಹದೇವಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ರಮೇಶ್ (ಮುದ್ದೇಗೌಡ), ತಾಪಂ ಮಾಜಿ ಸದಸ್ಯ ಗುರುಸ್ವಾಮಿ, ಕಾರ್ಯನಿರ್ವಹಕ ಅಧಿಕಾರಿ ಎಂ.ಎಸ್.ರಮೇಶ್, ಗ್ರಾ.ಪಂ ಅಧ್ಯಕ್ಷೆ ಸಕ್ಕುಬಾಯಿ, ಪಿಡಿಒ ಎಂ.ಡಿ.ಮಾಯಪ್ಪ ಇದ್ದರು.