ವಿಜಯಪಥ ಸಮಗ್ರ ಸುದ್ದಿ
ತಿ.ನರಸೀಪುರ: ಪಟ್ಟಣದ ಇಂದಿರಾ ಕ್ಯಾಂಟೀನ್‍ಗೆ ಭಾನುವಾರ ಬೆಳಗ್ಗೆ ಭೇಟಿ ನೀಡಿದ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಸ್ವಚ್ಛತೆ ಹಾಗೂ ಅಡುಗೆ ತಯಾರಿಕಾ ವ್ಯವಸ್ಥೆಯನ್ನು ಖುದ್ದು ಪರಿಶೀಲನೆ ಮಾಡಿ ಚಿತ್ರಾನ್ನವನ್ನು ಟೆಸ್ಟ್ ಮಾಡಿದ್ದಾರೆ.
ಇಂದಿರಾ ಕ್ಯಾಂಟೀನ್‍ನಲ್ಲಿಯೇ ಚಿತ್ರಾನ್ನ ಸೇವಿಸಿದ ಸೋಮಶೇಖರ್, ಗುಣಮಟ್ಟದ ವ್ಯವಸ್ಥೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರತಿದಿನ ಬೆಳಗ್ಗೆ 200 ಮಂದಿಗೆ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ತಲಾ 200 ಮಂದಿಗೆ ಆಗುವಷ್ಟು ಊಟವನ್ನುಸಿದ್ಧಪಡಿಸುತ್ತಿರುವುದಾಗಿ ಕ್ಯಾಂಟೀನ್ ನಿರ್ವಾಹಣೆ ಹೊತ್ತವರಿಂದ ಮಾಹಿತಿ ಪಡೆದುಕೊಂಡರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಇಂದಿರಾ ಕ್ಯಾಂಟೀನ್‍ನಲ್ಲಿ ಉತ್ತಮವಾದ ವ್ಯವಸ್ಥೆ ಮಾಡಲಾಗಿದ್ದು, ಆಹಾರ ಗುಣಮಟ್ಟವನ್ನು ಕಾಯ್ದುಕೊಳ್ಳಲಾಗಿದೆ. ಸ್ವತಃ ನಾನು ತಿಂಡಿಯನ್ನು ಸೇವಿಸುವ ಮೂಲಕ ಪರಿಶೀಲನೆ ನಡೆಸಿದೆ. ಶುಚಿ ಮತ್ತು ರುಚಿಯಾಗಿ ತಿಂಡಿ ತಯಾರಿಸಲಾಗುತ್ತಿದೆ ಎಂದು ತಿಳಿಸಿದರು.
ಶಾಸಕ ಅಶ್ವಿನ್ ಕುಮಾರ್ ಹಾಗೂ ಸಂಸದ, ಔಷಧ ಟಾಸ್ಕ್ ಫೋರ್ಸ್ ಸಮಿತಿ ಅಧ್ಯಕ್ಷ ಪ್ರತಾಪ್ ಸಿಂಹ ಸೇರಿದಂತೆ ಹಲವರು ಇದ್ದರು.