ವಿಜಯಪಥ ಸಮಗ್ರ ಸುದ್ದಿ
ಮೈಸೂರು: ಕೊರೊನಾದ ಈ ಸಂಕಷ್ಟದಲ್ಲಿ ಔಷಧಕ್ಕೆ ಹಣವಿಲ್ಲ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳುತ್ತಾರೆ. ಆದರೆ ಅವರು ತಮ್ಮ ವೈಯಕ್ತಿಕ ಮೋಜಿಗಾಗಿ ಈಜುಕೊಳವನ್ನು ಸರ್ಕಾರದ 28 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿಕೊಂಡಿರುವುದಕ್ಕೆ ಹಣ ಇತ್ತ ಎಂದು ಸಂಸದ ಪ್ರತಾಪ್ ಸಿಂಹ ಹರಿಹಾಯ್ದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಬಂದಿರುವ ಈ ವೇಳೆ ಸರಕಾರದ ಬೊಕ್ಕಸವೆ ಬರಿದಾಗಿದೆ. ಈ ಬಗ್ಗೆ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಅವರೆ ಹೇಲುತ್ತಿದ್ದಾರೆ. ಈ ನಡುವೆ ಪಿಎಂ ಕೇರ್ಸ್ ನಿಧಿಯಡಿ ಜಿಲ್ಲೆಗೆ 40 ವೆಂಟಿಲೇಟರ್ ಕೊಟ್ಟಿದ್ದಾರೆ. ಅದನ್ನು ಎಲ್ಲಿ ಅಳವಡಿಸಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು.
ಇನ್ನು 41 ಕೋಟಿ ರೂ.ಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರು ಬಿಡುಗಡೆ ಮಾಡಿಸಿ ಜಿಲ್ಲೆಗೆ ತಂದಿದ್ದಾರೆ. ಆದರೆ ಈ ಹಣದಲ್ಲಿ 39 ಕೋಟಿ ರೂ. ವೆಚ್ಚವಾಗಿದೆ ಎಂದು ಜಿಲ್ಲಾಧಿಕಾರಿ ಹೇಳುತ್ತಿದ್ದಾರೆ. ಈ ಬಗ್ಗೆ ಲೆಕ್ಕಕೊಡಬೇಕು. ಈ ಹಣವನ್ನು ಯಾವುದಕ್ಕೆ ಖರ್ಚು ಮಾಡಿದ್ದೀರಿ, ಯಾವ ಗುತ್ತಿಗೆದಾರರಿಗೆ ವಿತರಿಸಿದ್ದೀರಿ ಎಂಬ ಬಗ್ಗೆ ಲೆಕ್ಕ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನು ಔಷಧ ಖರೀದಿಸಲು 25 ಲಕ್ಷ ರೂ. ಬಿಡುಗಡೆ ಮಾಡಿ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಕೇಳಿದರೆ ಹಣವಿಲ್ಲ ಎಂದು ಹೇಳಿದ್ದಾರೆ. ಆದರೆ, ಸ್ವಿಮ್ಮಿಂಗ್ ಪೂಲ್ ಕಟ್ಟಿರುವುದಕ್ಕೆ ಹಣವಿದೆ, ಔಷಧ ಖರೀದಿಸುವುದಕ್ಕೆ ಹಣವಿಲ್ಲ ಜತೆಗೆ ಅನುಮತಿ ಸಿಕ್ಕಿಲ್ಲ, ಟೆಂಟರ್ ಕರೆದಿಲ್ಲ ಎಂದು ಸಬೂಬು ಹೇಳುತ್ತೀರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಇವರಿಗೆ ಹೆರಿಟೇಜ್ ಕಟ್ಟದಲ್ಲಿ ಈಜುಕೊಳ ಕಟ್ಟಿಸಿಕೊಳ್ಳಲು ಯಾರು ಅನುಮತಿ ನೀಡಿದರು, ಹೆರಿಟೇಜ್ ಸಂಘಟನೆ ಮತ್ತು ಪಾಲಿಕೆಯಿಂದ ಅನುಮತಿ ಪಡೆದಿದ್ದಾರೆಯೇ ಎಂದು ಕಿಡಿಕಾರಿದರು.