ಬೆಂಗಳೂರು: ಇನ್ನೂ ಸಾರಿಗೆ ನೌಕರರಿಗೆ ಕಳೆದ ಜುಲೈ ತಿಂಗಳ ವೇತನವನ್ನು ಆಗಸ್ಟ್ 18ನೇ ತಾರೀಖಾದರು ಬಿಡುಗಡೆಮಾಡಿಲ್ಲ. ಹೀಗಾಗಿ ಸಾರಿಗೆ ನೌಕರರ ಮನೆಗಳಲ್ಲಿ ಬರುವ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮವೂ ಇಲ್ಲದಂತಾಗುತ್ತಿದೆ.
ವರಮಹಾಲಕ್ಷ್ಮೀ ಹಬ್ಬದ ವೇಳೆಗೂ ವೇತನ ಬಿಡುಗಡೆಯಾಗುವುದು ಅನುಮಾನ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ. ಸಾರಿಗೆ ನೌಕರರ ಸಂಬಳಕ್ಕಾಗಿ ಈ ಹಿಂದಿನ ಸರ್ಕಾರ ಹಣ ಬಿಡುಗಡೆ ಮಾಡಿತ್ತು. ಹೀಗಾಗಿ ಜೂನ್ ವರೆಗೆ ಯಾವುದೇ ತೊಂದರೆ ಇಲ್ಲದೆ ಎಲ್ಲ ನೌಕರರಿಗೂ ಸಂಬಳ ಬಿಡುಗಡೆ ಮಾಡಲಾಗಿತ್ತು.
ಆದರೆ ಈಗ ಸಂಸ್ಥೆಯ ನೌಕರರಿಗೆ ಹಣ ಬಿಡುಗಡೆ ಮಾಡುವಂತೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಮನವಿ ಮಾಡಿದ್ದರೂ ನೂತನ ಸಿಎಂ ಬಸವರಾಜ್ ಬೊಮ್ಮಯಿ ಹಣ ಬಿಡುಗಡೆ ಮಾಡದ ಕಾರಣ ಈವರೆಗೂ ಜುಲೈ ತಿಂಗಳ ವೇತನ ಬಿಡುಗಡೆಯಾಗಿಲ್ಲ.
ಹೇಗೋ ಹಿಂದಿನ ಸಾರಿಗೆ ಸಚಿವರು ಅಂದಿನ ಸಿಎಂ ಬಿಎಸ್ವೈ ಅವರಿಗೆ ಆಪ್ತರಾಗಿದ್ದ ಕಾರಣ ಕಳೆದ ಒಂದೂವರೆ ವರ್ಷದಿಂದ ಸಾರಿಗೆ ನೌಕರರ ಸಂಬಳಕ್ಕಾಗಿ ಹಣ ಬಿಡುಗಡೆ ಮಾಡಿಸಿಕೊಂಡಿದ್ದರು. ಆದರೆ, ನೂತನ ಸಾರಿಗೆ ಸಚಿವರು ಸಿಎಂ ಬಳಿ ಸಂಬಳಕ್ಕಾಗಿ ಹಣ ನೀಡುವಂತೆ ಇನ್ನೂ ಮನವಿ ಮಾಡಿಲ್ಲ ಅನ್ನೋ ಮಾಹಿತಿ ಇದೆ.
ಕಾರಣ ಸಾರಿಗೆ ಸಚಿವರು ಖಾತೆ ಬದಲಾವಣೆ ಮಾಡಿಕೊಡುವಂತೆ ಮನವಿ ಮಾಡಿದ್ದರೂ ಸಿಎಂ ಒಪ್ಪಿಲ್ಲ. ಇನ್ನು ಸಾರಿಗೆ ನೌಕರರ ಸಂಬಳಕ್ಕಾಗಿ ಹಣ ಬಿಡುಗಡೆ ಮಾಡಿ ಎಂದು ಸಿಎಂ ಅವರ ಬಳಿ ಕೇಳಿದರೆ ಹೇಗೆ ಸ್ಪಂದಿಸುತ್ತಾರೋ ಎಂದು ಸಚಿವರು ಆ ಬಗ್ಗೆ ಮಾತನಾಡಿಲ್ಲ ಎಂದು ಹೇಳಲಾಗುತ್ತಿದೆ.
ಇನ್ನು ಸರ್ಕಾರ ಅರ್ಧ ವೇತನಕ್ಕಾದರೂ ಹಣ ಬಿಡುಗಡೆ ಮಾಡಿ ಉಳಿದರ್ಧ ವೇತನವನ್ನು ಆಯಾಯ ಸಾರಿಗೆ ನಿಗಮಗಳು ಹೊಂದಿಸಿಕೊಳ್ಳಲು ಹೇಳತ್ತದೋ ಏನೋ ಗೊತ್ತಿಲ್ಲ. ಹೀಗಾಗಿ ಇತ್ತ ಸಾರಿಗೆ ನಿಗಮಗಳು ಜುಲೈ ವೇತನವನ್ನು ಆಗಸ್ಟ್ 18 ಆದರೂ ನೀಡಲು ಸಾಧ್ಯವಾಗಿಲ್ಲ.
ಇದರಿಂದ 1.30 ಲಕ್ಷ ನೌಕರರು ಸಂಬಳ ಬಿಡುಗಡೆಯಾಗುತ್ತದೋ ಇಲ್ಲವೋ ಎಂಬ ಆತಂಕದಲ್ಲಿದ್ದಾರೆ. ಪೂರ್ಣ ಪ್ರಮಾಣದಲ್ಲಿ ಬಸ್ ಸಂಚಾರ ಆರಂಭವಾದರೂ ನಿಗಮಗಳಲ್ಲಿ ವೇತನ ನೀಡೋಕೆ ದುಡ್ಡಿಲ್ಲ. ಈಗ ಬರುತ್ತಿರುವ ಆದಾಯ ಬಸ್ ಡೀಸೆಲ್ ತುಂಬಿಸುವುದಕ್ಕೇ ಸರಿಯಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.